ADVERTISEMENT

ಡ್ರಾಪ್‌ ನೆಪದಲ್ಲಿ ಪ್ರಯಾಣಿಕನ ಸುಲಿಗೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 5:33 IST
Last Updated 6 ನವೆಂಬರ್ 2019, 5:33 IST
   

ಬೆಂಗಳೂರು: ಡ್ರಾಪ್‌ ಕೊಡುವ ನೆಪದಲ್ಲಿ ಪ್ರಯಾಣಿಕರೊಬ್ಬರನ್ನು ಟೆಂಪೊ ಟ್ರಾವೆಲ್‌ ವಾಹನಕ್ಕೆ ಹತ್ತಿಸಿಕೊಂಡ ದುಷ್ಕರ್ಮಿಗಳು, ಮಾರ್ಗ ಮಧ್ಯೆ ಬೆದರಿಸಿ ಹಣ, ಉಂಗುರ, ಮೊಬೈಲ್‌ ಕಿತ್ತುಕೊಂಡು ವಾಹನದಿಂದ ಕೆಳಗೆ ತಳ್ಳಿ ಪರಾರಿಯಾದ ಘಟನೆ ರಾಜರಾಜೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಾಗರಬಾವಿಯ ನಿವಾಸಿ ಗಂಗಾಧರಯ್ಯ ಎಂಬುವವರು ರಾತ್ರಿ 12.20ರ ಸುಮಾರಿಗೆ ಗೊರಗುಂಟೆಪಾಳ್ಯ ಬಳಿ ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಬಂದ ಟೆಂಪೊ ಟ್ರಾವೆಲ್‌ನ ಚಾಲಕ, ಎಲ್ಲಿಗೆ ಹೋಗಬೇಕೆಂದು ಗಂಗಾಧರಯ್ಯ ಅವರನ್ನು ಕೇಳಿದ್ದಾನೆ. ನಾಗರಬಾವಿಗೆ ಹೋಗಬೇಕೆಂದು ಹೇಳಿದಾಗ, ‘ನಾನೂ ಆ ಕಡೆಗೆ ಹೋಗುತ್ತಿದ್ದೇನೆ’ ಎಂದು ಹತ್ತಿಸಿಕೊಂಡಿದ್ದಾನೆ. ಅದಾಗಲೇ ವಾಹನದಲ್ಲಿ ಕುಳಿತಿದ್ದ ನಾಲ್ವರನ್ನು ಪ್ರಯಾಣಿಕರು ಎಂದು ಗಂಗಾಧರಯ್ಯ ಭಾವಿಸಿದ್ದರು.

ಆದರೆ, ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಗೆ ವಾಹನ ತಲುಪುತ್ತಿದ್ದಂತೆ ವಾಹನದಲ್ಲಿದ್ದವರು ಗಂಗಾಧರಯ್ಯ ಅವರನ್ನು ಬೆದರಿಸಿ, ಹೊಡೆದು, ಹಣ, ಉಂಗುರ, ಮೊಬೈಲ್‌ ಕಿತ್ತುಕೊಂಡು ಬಳಿಕ ಕೆಳಗೆ ತಳ್ಳಿದ್ದಾರೆ. ಈ ಬಗ್ಗೆ ರಾಜರಾಜೇಶ್ವರಿನಗರ ಠಾಣೆಯಲ್ಲಿ ಗಂಗಾಧರಯ್ಯ ದೂರು ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.