ADVERTISEMENT

ಒಂದೇ ತಾಯಿಯ ನಾಲ್ಕು ಮಕ್ಕಳ ಶವಯಾತ್ರೆ, ಎದುರು ಬದುರು ಮನೆಯಲ್ಲಿ ಸಾವಿನ ಶೋಕ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 20:00 IST
Last Updated 28 ಏಪ್ರಿಲ್ 2019, 20:00 IST
ಮೃತ ಮಕ್ಕಳ ತಾಯಿ ಶಕೀಲಾ
ಮೃತ ಮಕ್ಕಳ ತಾಯಿ ಶಕೀಲಾ    

ಹೆಗಡೆ ನಗರದ 15ನೇ ಕ್ರಾಸ್‌ನಿಂದ ಭಾನುವಾರ ಬೆಳಿಗ್ಗೆ ಒಟ್ಟು ಐವರ ಜನಾಜಾ (ಶವ ಸಂಸ್ಕಾರ ಮೆರವಣಿಗೆ) ಖಬ್ರಸ್ಥಾನ್‌ನತ್ತ ಹೊರಟಿತ್ತು. ಕಿಕ್ಕಿರಿದು ಸೇರಿದ ಜನ. ಮೌನದಲ್ಲೇ ಸಾಗಿದ ಆ ಮಕ್ಕಳ ಶವಯಾತ್ರೆಗೆ ಪ್ರದೇಶದ ಬಹುತೇಕರು ಕಂಬನಿ ಮಿಡಿಯುತ್ತ ಆ ಎಲ್ಲರಿಗೂ ಸ್ವರ್ಗ (ಜನ್ನತ್‌) ಸಿಗಲಿ ಎಂದುಮನದೊಳಗೇ ದುವಾ ಮಾಡಿದರು. ಬಹುತೇಕರ ಕಣ್ಣಾಲಿಗಳು ಹಸಿಗೊಂಡಿದ್ದವು.

ಶನಿವಾರ ಹೆಗಡೆ ನಗರದ ಐವರು ಸಿದ್ಧರ ಬೆಟ್ಟದ ಕಲ್ಯಾಣಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿತ್ತು. ಅವರ ಅಂತಿಮ ಸಂಸ್ಕಾರ ಭಾನುವಾರ ನೆರವೇರಿತು.

ಸತ್ತವರ ಪೈಕಿ ನಾಲ್ವರು ಒಂದೇ ತಾಯಿಯ ಮಕ್ಕಳು. ಮತ್ತೊಬ್ಬ ವ್ಯಕ್ತಿ ಎದುರಿನ ಮನೆಯವರು. ಎದುರು ಬದುರು ಮನೆಗಳು. ಮನೆಗಳ ಮುಂದಿನ ಜಾಗದಲ್ಲಿ ಶಾಮಿಯಾನಾ ಹಾಕಲಾಗಿತ್ತು. ಉಭಯ ಕುಟುಂಬಗಳಿಗೆ ಸಾಂತ್ವನ ಹೇಳಲು ಬಂಧುಗಳು ನೆರೆದಿದ್ದರು. ಖಬ್ರಸ್ಥಾನ್‌ನಿಂದ ಮರಳಿ, ಬಂಧು ಮಿತ್ರರೊಂದಿಗೆ ಕಣ್ಣೀರು ಒರೆಸಿಕೊಳ್ಳುತ್ತಲೇ ಒಂದೆಡೆ ಕೂರುತ್ತಿದ್ದ ಕುಟುಂಬವನ್ನು ‘ಮೆಟ್ರೊ’ ಸಂಪರ್ಕಿಸಿತು.

ADVERTISEMENT

ಮನೆಯವರೆಲ್ಲ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ‘ಮೆಟ್ರೊ’ ಮಾತಿಗಿಳಿದಾಗ ಹಿಂಜರಿಕೆಯಿಂದಲೇ ಮನೆಯ ಯುವಕರು ಮುಂದೆ ಬಂದರು. ಘಟನೆಯ ವಿವರ ನೀಡಿದರು. ಮೃತ ಮಕ್ಕಳ ತಾಯಿ ಶಕೀಲಾ ಅವರನ್ನು ಕರೆತಂದರು. ಆ ತಾಯಿಯ ಕಂಗಳಲ್ಲಿ ಕಲ್ಯಾಣಿಯ ದಾರುಣ ಸ್ಥಿತಿಯ ಛಾಯೆ ಹಾಗೆಯೇ ಉಳಿದಿತ್ತು. ಸುಸ್ತಾದಂತಿದ್ದ ಅವರಲ್ಲಿ ಕಣ್ಣೆತ್ತಿ ನೋಡುವಷ್ಟೂ ತ್ರಾಣವಿರಲಿಲ್ಲ.

ಹೇಗಮ್ಮ ನಡೀತು ಇದೆಲ್ಲಾ? ಎಂದಾಗ, ‘ಹನ್ನೆರಡು ವರ್ಷದ ಮಗ ನೀರು ತರಲೆಂದು ಡಬ್ಬಾಹಿಡಿದು ಕಲ್ಯಾಣಿಗಿಳಿದ. ಕೈಯಲ್ಲಿನ ಡಬ್ಬಾ ಜಾರಿ ನೀರಿನಲ್ಲಿ ತೇಲತೊಡಗಿತು. ಅದನ್ನು ಹಿಡಿಯಲೆಂದು ಹೋಗುತ್ತ ಹಾಗೆಯೇ ನೀರಿಗಿಳಿದ. ಅವನನ್ನು ನೋಡಲು ಮತ್ತೊಬ್ಬರು ಹೋದರು. ಹಾಗೆಯೇ ಒಬ್ಬರ ಹಿಂದೆ ಒಬ್ಬರು ಹೋಗಿ ಇದೆಲ್ಲ ನಡೀತು. ಇಷ್ಟೆಲ್ಲ ನೋಡ ನೋಡುತ್ತಿದ್ದಂತೆ ನಡೆದು ಹೋಯಿತಲ್ಲ..’ ಅವರ ದುಃಖ ನಿಲ್ಲಲಿಲ್ಲ.

ಅಲ್ಲಿಗೆ ಹೋಗಿದ್ದು? ಎಂದಾಗ, ‘ದರ್ಗಾಕ್ಕೆ ಭೇಟಿ ಕೊಡೋಣ ಅಂತ ಹೋಗಿದ್ವಿ’ ಎಂದರು.

ನಿಮ್ಮ ರಕ್ಷಣೆಗೆಂದು ದರ್ಗಾದ ಹತ್ತಿರ ಯಾರೂ ಇರಲಿಲ್ಲವೇ? ಎಂದಾಗ, ‘ಕಲ್ಯಾಣಿ ದರ್ಗಾದಿಂದ ಸ್ವಲ್ಪ ದೂರದಲ್ಲಿದೆ. ಯಾರೂ ಇರಲ್ಲ..’ ಎನ್ನುತ್ತ ಮತ್ತೆ ಕಣ್ಣೀರಿಟ್ಟರು.‘ಅಲ್ಲಾಹು ಕೊಟ್ಟಿದ್ದ, ವಾಪಸ್‌ ತಗೊಂಡ’ ಎನ್ನುವರ್ಥದಲ್ಲಿ ಆಕಾಶದತ್ತ ಮುಖ ಮಾಡಿ ದುಪಟ್ಟಾದಿಂದ ಮುಖಕ್ಕೆಳೆದು ಒಳನಡೆದರು.

ಮನೆಯ ಸ್ಥಿತಿ ನೋಡಿದರೆ ಅದೊಂದು ಬಾಡಿಗೆ ಮನೆ. ಪುಟ್ಟದು. ‘ಇವರದು ಶ್ರಮಿಕ ಕುಟುಂಬ. ದುಡಿಯುವುದು ಮತ್ತು ಪುಟ್ಟ ಸಂಪಾದನೆಯಿಂದ ಮನೆ ನೋಡಿಕೊಳ್ಳುವುದು. ಅಷ್ಟೇ. ಹುಡುಗನೊಬ್ಬ ಆಟೋ ಓಡಿಸಿ ಮನೆಯ ಖರ್ಚಿಗೆ ನೆರವಾಗುತ್ತಿದ್ದ. ಇನ್ನು ಅವರಿಗೆ ಆಸರೆ ಎಂದರೆ ಉಳಿದಿರುವ ಒಬ್ಬ ಮಗ ಮತ್ತು ಆಟೋ ಅಷ್ಟೇ’ ಎಂದು ಶಕೀಲಾ ಅವರ ಸಂಬಂಧಿಯೊಬ್ಬರು ಇರುವ ಸ್ಥಿತಿಯನ್ನು ವಿವರಿಸಿದರು.

‘ಆ ಸ್ಥಳದಲ್ಲಿ ಇಂಥ ಸುಮಾರು ಘಟನೆಗಳು ನಡೆದಿವೆ ಎಂದು ಅಲ್ಲಿನವರು ಹೇಳುತ್ತಾರೆ. ಅಂಥ ಜಾಗದ ಸುತ್ತ ಬೇಲಿ ಹಾಕಿ ಹೀಗಾಗದಂತೆ ವ್ಯವಸ್ಥೆ ಮಾಡಬೇಕಲ್ಲವೇ?‘ ಎಂದು ಬುರ್ಖಾಧಾರಿ ಮಹಿಳೆಯೊಬ್ಬರು ಆಕ್ರೋಶದಿಂದಲೇ ನುಡಿದರು.

ಮುನೀರ್‌ ಮನೆಯಲ್ಲಿ ಹೆಣ್ಮಕ್ಕಳ ಮೌನ

ಶಕೀಲಾ ಅವರ ಮನೆಯ ದಾರುಣ ಸ್ಥಿತಿ ಕಂಡು ವಾಪಸ್‌ ಆಗುವಾಗ ಎದುರಿನ ಮನೆಯ ಸಂಬಂಧಿಕರು ನಮ್ಮ ಮನೆಯಲ್ಲೂ ಅದೇ ಘಟನೆಯಲ್ಲಿ ಸಾವಾಗಿದೆ ಎಂದು ಗಮನ ಸೆಳೆದರು. ‘ಬನ್ನಿ ಸಾಬ್‌’ ಎನ್ನುತ್ತ ಮೃತಪಟ್ಟ ಐವರಲ್ಲಿ ಒಬ್ಬರಾದ ಮುನೀರ್‌ ಖಾನ್‌ ಕುಟುಂಬದ ಹಿರೀಕರೊಬ್ಬರು ಆಹ್ವಾನಿಸಿದರು. ಒಳಕ್ಕೆ ಕಾಲಿಡುತ್ತಿದ್ದಂತೆ ಆ ಕಿರಿದಾದ ಗೇಟ್‌ ಮುಂದಿನ ಜಾಗಕ್ಕೆ ಹೊಂದಿಕೊಂಡ ಪುಟ್ಟ ಮನೆ ಕಾಣಿಸಿತು. ಮುನೀರ್‌ ಖಾನ್‌ರ ಮನೆ. ತಾಯಿ ಅವರ ಹೆಂಡತಿ ಮತ್ತು ಆರು ಜನ ಮಕ್ಕಳು. ಎಲ್ಲ ಹೆಣ್ಣು ಮಕ್ಕಳೇ. ಹದಿ ಹರೆಯದವರಿಂದ 20ರವರೆಗಿನ ಆ ಪುಟಾಣಿ ಹೆಣ್ಣು ಮಕ್ಕಳು ನಿನ್ನೆಯಿಂದ ಅತ್ತು ಅತ್ತು ಸುಸ್ತಾಗಿದ್ದರು. ಅವರ ಕಂಗಳೆಲ್ಲ ಒಣಗಿಹೋದಂತಿದ್ದವು. ತಾಯಿ ಆಘಾತದಿಂದ ಹೊರಕ್ಕೆ ಬಂದಂತೆ ಕಾಣಿಸಲಿಲ್ಲ. ಮೌನವಾಗಿದ್ದರು. ಮಕ್ಕಳ ಮುಖಗಳಲ್ಲಿ ಕನಸುಗಳು ಬಾಡಿದಂತಿದ್ದವು. ಆಟೋ ಓಡಿಸುತ್ತಿದ್ದ ಮುನೀರ್‌ ಶ್ರಮದಿಂದಲೇ ಕುಟುಂಬದ ಬದುಕು ಸಾಗುತ್ತಿತ್ತು. ಆಟೊ ಇದೆ, ಆ ಪುಟ್ಟ ಮನೆ ಇದೆ. ಇದಷ್ಟೇ ಈಗ ಅವರಲ್ಲಿ ಉಳಿದ ಆಸರೆ.

ಎರಡು ಮನೆಯ ನಡುವಿನ ಪುಟ್ಟ ರೋಡ್‌ನಲ್ಲಿ ಸೇರಿದ್ದ ಅಪಾರ ಬಂಧುಗಳ ಸಂದಣಿ ಕರಗತೊಡಗಿತ್ತು. ಬಂಧುಗಳಿಗೆ ಬಡಿಸಿದ ಅನ್ನದ ತಟ್ಟೆ, ಪಾತ್ರೆಗಳನ್ನು ತೊಳೆಯುವಲ್ಲಿ ಕುಟುಂಬದವರು ನಿರತರಾಗಿದ್ದರು. ಮುನೀರ್‌ ಕುಟುಂಬದವರು ಹೇಳುವಂತೆ ಮಕ್ಕಳನ್ನು ಉಳಿಸಲು ಹೋಗಿ ಮುನೀರ್‌ ನೀರು ಪಾಲಾದರು. ‘ಅದೊಂದು ಪಾಚಿ ಮತ್ತು ಕೆಸರಿನಿಂದ ತುಂಬಿದ ನೀರಿನ ಕಲ್ಯಾಣಿ. ಒಬ್ಬ ಹನ್ನೆರಡು ವರ್ಷದ ಹುಡುಗ ಮೊದಲು ನೀರು ತರಲು ಹೋಗಿ ಬಿದ್ದ. ಅವನ ನೋಡಲೆಂದು ಇಬ್ಬರು ಹೆಣ್ಣು ಮಕ್ಕಳು ಹೋದರು. ಅವರ ಹಿಂದೆ ಮತ್ತೊಬ್ಬ ಹುಡುಗ ಹೋದ. ಒಟ್ಟು ನಾಲ್ವರು ನೀರು ಪಾಲಾಗುವುದನ್ನು ನೋಡಿ ರಕ್ಷಣೆಗೆಂದು ಹೋದ ಮುನೀರ್‌ ಖಾನ್‌ ಕೂಡ ಅವರ ಜೊತೆ ನೀರು ಪಾಲಾದರು. ಮಣ್ಣು, ಪಾಚಿಯಿಂದ ತುಂಬಿದ ನೀರಿಗೆ ಬಿದ್ದಾಗ ಮೇಲೆ ಬರೋಕೆ ಆಗಿಲ್ಲ. ಎಲ್ಲ ನೋಡ ನೋಡುತ್ತಿದ್ದಂತೆ ನಡೆದುಹೋಯಿತು. ಬೆಳಿಗ್ಗೆ ಐವರ ಜನಾಜಾ ನೋಡಿ ಮನಸು ಮರುಗಿತು. ಹೆಗಡೆ ನಗರ ಸರ್ಕಲ್‌ ಟ್ರಾಫಿಕ್‌ ಜ್ಯಾಮ್‌ ಆಗಿತ್ತು. ಎಲ್ಲ ಅವನದೇ (ಆಕಾಶ ತೋರಿಸುತ್ತ) ಆಟ’ ಎಂದು ತಮ್ಮ ನಂಬಿಕೆಯ ದೈವವನ್ನು ಸ್ಮರಿಸುತ್ತ ಆ ಹಿರೀಕರು ಮೌನವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.