ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2024 ಮತ್ತು 2025ನೇ ಸಾಲಿನ ‘ಡಾ.ರಾಜ್‌ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ’ಗೆ ಕ್ರಮವಾಗಿ ರಂಗಕಲಾವಿದೆ ಮತ್ತು ಗಾಯಕಿ ಸುಮತಿ ಶ್ರೀ ಎಸ್. ನವಲಿ ಹಿರೇಮಠ ಮತ್ತು ಚಿತ್ರನಟ ಹೊನ್ನವಳ್ಳಿ ಕೃಷ್ಣ ಅವರು ಆಯ್ಕೆಯಾಗಿದ್ದಾರೆ.
ಸುಮತಿ ಶ್ರೀ ಎಸ್.ನವಲಿ ಹಿರೇಮಠ ಅವರು ಏಳನೆಯ ವಯಸ್ಸಿನಿಂದಲೂ ರಂಗಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಂತ ನಾಟಕ ಕಂಪನಿಯನ್ನು ನಡೆಸಿದ್ದಾರೆ. ಸವಡಿಯಲ್ಲಿ ವೃದ್ದಾಶ್ರಮ ಹಾಗೂ ಉಚಿತ ಕನ್ನಡ ಶಾಲೆ ನಡೆಸುತ್ತಿದ್ದಾರೆ. ಮೂರು ಹಳ್ಳಿಗಳನ್ನು ದತ್ತು ಪಡೆದು ಅವುಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ನಟ ಹೊನ್ನವಳ್ಳಿ ಕೃಷ್ಣ ಅವರು ರಾಜ್‌ಕುಮಾರ್ ಕುಟುಂಬದ ಆಪ್ತರು. ರಾಜ್‌ಕುಮಾರ್ ಅವರೊಂದಿಗೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ರಾಜ್‌ಕುಮಾರ್ ಅವರಿಗೆ ’ದಾದಾ ಸಾಹೇಬ್ ಫಾಲ್ಕೆ’ ಪುರಸ್ಕಾರ ಬಂದಾಗ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ದತ್ತಿ ಸ್ಥಾಪಿಸಲಾಯಿತು. ಮುಂದೆ ಪಾರ್ವತಮ್ಮ ರಾಜ್‌ಕುಮಾರ್ ಅವರು, ಇದಕ್ಕೆ ಇನ್ನಷ್ಟು ಹಣ ಸೇರಿಸಿದ್ದರು. ರಂಗಭೂಮಿ ಅಥವಾ ಚಿತ್ರರಂಗದ ಸಾಧಕರಿಗೆ ಈ ದತ್ತಿಯನ್ನು ನೀಡಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.