ADVERTISEMENT

₹7.7 ಕೋಟಿ ಮೊತ್ತದ ಡ್ರಗ್ಸ್ ಜಪ್ತಿ: ವಿದೇಶಿ ಪ್ರಜೆಗಳೂ ಸೇರಿ 19 ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 15:41 IST
Last Updated 18 ನವೆಂಬರ್ 2025, 15:41 IST
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಡ್ರಗ್ಸ್ ಪರಿಶೀಲಿಸಿದ ನಗರ ಪೊಲೀಸ್‌ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್‌ 
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಡ್ರಗ್ಸ್ ಪರಿಶೀಲಿಸಿದ ನಗರ ಪೊಲೀಸ್‌ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್‌    

ಬೆಂಗಳೂರು: ಸುದ್ದಗುಂಟೆಪಾಳ್ಯ, ಮಹದೇವಪುರ, ವರ್ತೂರು, ಕೆ.ಜಿ.ನಗರ ಸೇರಿದಂತೆ ನಗರದ ಹಲವು ಕಡೆ ಕಾರ್ಯಾಚರಣೆ ನಡೆಸಿದ ಸಿಸಿಬಿಯ ಮಾದಕ ವಸ್ತುಗಳ ನಿಯಂತ್ರಣ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಡ್ರಗ್ಸ್ ಮಾರಾಟ ಮಾಡುತ್ತಿದ್ದ 14 ವಿದೇಶಿ ಪೆಡ್ಲರ್‌ಗಳೂ ಸೇರಿದಂತೆ 19 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ₹7.7 ಕೋಟಿ ಮೌಲ್ಯದ 2 ಕೆ.ಜಿ. 804 ಗ್ರಾಂ ಎಂಡಿಎಂಎ ಕ್ರಿಸ್ಟಲ್‌, 2 ಕೆ.ಜಿ. 100 ಗ್ರಾಂ ಹೈಡ್ರೊ ಗಾಂಜಾ, ಒಂದು ಬೈಕ್‌, ಏಳು ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

ಸುದ್ದಗುಂಟೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡ್ರಗ್ಸ್‌ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ನೈಜೀರಿಯಾದ ಅನ್ಯುವಿಲ್‌ ಮಾರ್ವೆಲಸ್‌ ಗ್ಲೋರಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  

ADVERTISEMENT

ಆರೋಪಿಯಿಂದ ₹75 ಲಕ್ಷ ಮೌಲ್ಯದ 760 ಗ್ರಾಂ ಎಂಡಿಎಂ ಕ್ರಿಸ್ಟಲ್‌ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿರುವ ಪೇಯಿಂಗ್‌ ಗೆಸ್ಟ್‌ ಹಾಗೂ ಹಾಸ್ಟೆಲ್‌ನಲ್ಲಿ ನೆಲಸಿದ್ದವರಿಗೆ ಡ್ರಗ್ಸ್ ಪೂರೈಸುತ್ತಿದ್ದ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರವೀಣ್‌ಕುಮಾರ್ (25), ಯಶವಂತ್, ರಾಹುಲ್‌ ಕೃಷ್ಣ (27), ಅಕ್ಷಯ್‌ (28), ಸಂತೋಷ್ ಕುಮಾರ್ (27) ಹಾಗೂ ರೋಷನ್‌ ಕುಮಾರ್‌ (28) ಬಂಧಿತರು.

ಬಂಧಿತರಿಂದ ₹60 ಲಕ್ಷ ಮೌಲ್ಯದ 600 ಗ್ರಾಂ ಹೈಡ್ರೊಗಾಂಜಾ ಹಾಗೂ ಐದು ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಬಾಡಿಗೆ ಮನೆಯಲ್ಲಿ ಡ್ರಗ್ಸ್ ದಾಸ್ತಾನು: ಡ್ರಗ್ಸ್ ಪೆಡ್ಲಿಂಗ್‌ ಮಾಡುವ ಉದ್ದೇಶದಿಂದ ಮಹದೇವಪುರದ ಬಿ.ನಾರಾಯಣಪುರದಲ್ಲಿ ಆರೋಪಿಗಳು ಬಾಡಿಗೆ ಮನೆ ಪಡೆದುಕೊಂಡಿದ್ದರು. ಆ ಮನೆಯಲ್ಲಿ ಹೈಡ್ರೊ ಗಾಂಜಾ ದಾಸ್ತಾನು ಮಾಡಿಕೊಂಡಿದ್ದರು ಎಂದು ಮೂಲಗಳು ಹೇಳಿವೆ.

ವರ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೆನ್ಯಾದ ಪೊಬೀನಾ ಮುಸಿಯೊ (27) ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾದ ಇಬುಕಾ ಹಾಗೂ ತಾಂಜೇನಿಯಾದ ನೊರಾ ಜೋಸೆಫ್‌ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಆರೋಪಿಯಿಂದ ₹2.15 ಕೋಟಿ ಮೌಲ್ಯದ ಎಂಡಿಎಂಎ ಕ್ರಿಸ್ಟಲ್‌, ಎರಡು ಮೊಬೈಲ್‌ ಹಾಗೂ ಎಲೆಕ್ಟ್ರಾನಿಕ್ ತೂಕದ ಯಂತ್ರ ಜಪ್ತಿ ಮಾಡಲಾಗಿದೆ.

ಪ್ರವಾಸಿ ವೀಸಾ ಪಡೆದು ಪೊಬೀನಾ ಮುಸಿಯೊ ಭಾರತಕ್ಕೆ ಬಂದಿದ್ದರು. ಕಮ್ಮನಹಳ್ಳಿಯಲ್ಲಿ ಹೇರ್‌ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಇಬುಕಾ ಹಾಗೂ ನೊರಾ ಜೋಸೆಫ್‌ ಅವರಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ, ಕಮ್ಮನಹಳ್ಳಿ ಸುತ್ತಮುತ್ತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಮೂಲಗಳು ಹೇಳಿವೆ.

ಉಳಿದೆಡೆ 12 ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

ವಿದೇಶಿ ಪ್ರಜೆಗಳ ಅನಧಿಕೃತ ವಾಸ

ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ನೆಲಸಿದ್ದ 12 ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.  ತಾಂಜೇನಿಯಾದ ಬಿಹನಿ ಕ್ಲಾವರಿ ನೈಜೀರಿಯಾದ ರಿಚರ್ಡ್‌ ಉಗಾಂಡದ ಮೆರ್ಸಿ ಸೇರಿದಂತೆ ಪಾಸ್‌ಪೋರ್ಟ್ ಹಾಗೂ ವೀಸಾ ಇಲ್ಲದೇ ಅನಧಿಕೃತವಾಗಿ ನಗರದಲ್ಲಿ ನೆಲಸಿದ್ದ 12 ಮಂದಿಯನ್ನು ಬಂಧಿಸಲಾಗಿದೆ.   ಬಂಧಿತ ವಿದೇಶಿ ಪ್ರಜೆಗಳನ್ನು ಎಫ್‌ಆರ್‌ಆರ್‌ಒ ಆದೇಶದಂತೆ ನೆಲಮಂಗಲ ಸಮೀಪದ ಸೊಂಡೇಕೊಪ್ಪದ ವಲಸಿಗರ ಬಂಧನ ಕೇಂದ್ರದಲ್ಲಿ ಬಿಡಲಾಗಿದೆ. ಅವರ ದೇಶಕ್ಕೆ ಕಳುಹಿಸುವ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಪೊಲೀಸರು ಹೇಳಿದರು.

ಪೊಬೀನಾ 
ಬಿಹನಿ ಕ್ಲಾವರಿ
ರಿಚರ್ಡ್‌ 
ಮೆರ್ಸಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.