ADVERTISEMENT

ಒಳ ಉಡುಪಿನಲ್ಲಿ ಡ್ರಗ್ಸ್: ಜೈಲಿನ ಎಫ್‌ಡಿಎ ಬಂಧನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 16:53 IST
Last Updated 3 ಫೆಬ್ರುವರಿ 2022, 16:53 IST
ಗಂಗಾಧರ್
ಗಂಗಾಧರ್   

ಬೆಂಗಳೂರು: ಒಳ ಉಡುಪಿನಲ್ಲಿ ಡ್ರಗ್ಸ್ ಬಚ್ಚಿಟ್ಟುಕೊಂಡು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ಸಾಗಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಗಂಗಾಧರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಗಂಗಾಧರ್, ಕಾರಾಗೃಹದ ದಾಖಲಾತಿ ವಿಭಾಗದಲ್ಲಿ ಎಫ್‌ಡಿಎ ಆಗಿ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಜೈಲಿನೊಳಗಿನ ಕೈದಿಗಳ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಅವರು, ನಿರಂತರವಾಗಿ ಡ್ರಗ್ಸ್ ಸಾಗಿಸುತ್ತಿದ್ದ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಗಂಗಾಧರ್ ಅವರು ಎಂದಿನಂತೆ ಗುರುವಾರ ಬೆಳಿಗ್ಗೆ ಕೆಲಸಕ್ಕೆಂದು ಜೈಲಿಗೆ ಬಂದಿದ್ದರು. ಪ್ರವೇಶ ದ್ವಾರದಲ್ಲಿ ಅವರನ್ನು ತಡೆದಿದ್ದ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) ಸಿಬ್ಬಂದಿ, ಪರಿಶೀಲನೆ ನಡೆಸಿದ್ದರು. ಅನುಮಾನಾಸ್ಪದ ವಸ್ತು ಇರುವುದು ಸಿಬ್ಬಂದಿಗೆ ಗೊತ್ತಾಗಿತ್ತು.’

ADVERTISEMENT

‘ಜೈಲಿನ ಕೊಠಡಿಯೊಂದಕ್ಕೆ ಗಂಗಾಧರ್ ಅವರನ್ನು ಕರೆದೊಯ್ದಿದ್ದ ಸಿಬ್ಬಂದಿ, ಹೆಚ್ಚಿನ ಪರಿಶೀಲನೆ ನಡೆಸಿದ್ದರು. ಅದೇ ಸಂದರ್ಭದಲ್ಲೇ ಆರೋಪಿಯ ಒಳ ಉಡುಪಿನಲ್ಲಿ ಡ್ರಗ್ಸ್ ಇರುವುದು ಪತ್ತೆಯಾಗಿತ್ತು. ಜೈಲಿನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ಕೆಎಸ್‌ಐಎಸ್‌ಎಫ್‌ ಸಿಬ್ಬಂದಿ, ಅವರ ನಿರ್ದೇಶನದಂತೆ ಆರೋಪಿಯನ್ನು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಮೊಬೈಲ್ ಸಹ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

ಡ್ರಗ್ಸ್ ಜಾಲದ ನಂಟು: ‘ಜೈಲಿನಲ್ಲಿರುವ ಕೈದಿಗಳಿಗೆ ಹೊರಗಿನಿಂದ ಡ್ರಗ್ಸ್ ಪೂರೈಸುವ ಜಾಲ ಸಕ್ರಿಯವಾಗಿರುವ ಅನುಮಾನವಿತ್ತು. ಅದೇ ಜಾಲದಲ್ಲಿ ಇದೀಗ ಜೈಲಿನ ಎಫ್‌ಡಿಎ ಸಿಕ್ಕಿಬಿದ್ದಿದ್ದಾರೆ. ಈತನ ಜೊತೆ ಬೇರೆ ಯಾರೆಲ್ಲ ಜಾಲದಲ್ಲಿದ್ದಾರೆಂಬುದನ್ನು ತಿಳಿದುಕೊಳ್ಳಲಾಗುತ್ತಿದೆ’ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.

‘ಎಫ್‌ಡಿಎ ಬಳಿ ಎಲ್‌ಎಸ್‌ಡಿ ಕಾಗದ ಚೂರು ಹಾಗೂ ಹಶೀಷ್ ಸಿಕ್ಕಿದೆ. ಇದನ್ನು ಕೊಟ್ಟವರು ಯಾರು ? ಹಾಗೂ ಇದನ್ನು ಜೈಲಿನಲ್ಲಿ ಯಾರಿಗೂ ಕೊಡಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿದರು.

ಅಮಾನತು: ಡ್ರಗ್ಸ್ ಪೂರೈಕೆ ವೇಳೆ ಸಿಕ್ಕಿಬಿದ್ದಿರುವ ಗಂಗಾಧರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

‘ಆರೋಪಿ ಗಂಗಾಧರ್ ಜೊತೆ ಮತ್ತಷ್ಟು ಮಂದಿ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ. ಅವರನ್ನು ಪತ್ತೆ ಮಾಡಿ ಬಂಧಿಸಿ’ ಎಂಬುದಾಗಿ ಜೈಲಿನ ಅಧಿಕಾರಿಗಳು, ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.