ADVERTISEMENT

ಗಿಫ್ಟ್‌ ಬಾಕ್ಸ್‌ನಲ್ಲಿ ಮಾದಕ ವಸ್ತು ಪೂರೈಕೆ

ಕೇರಳ ರಾಜ್ಯದ ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 18:52 IST
Last Updated 17 ನವೆಂಬರ್ 2022, 18:52 IST
   

ಬೆಂಗಳೂರು: ‘ಗಿಫ್ಟ್‌ ಬಾಕ್ಸ್‌’ನಲ್ಲಿ ಮಾದಕ ವಸ್ತು ‘ಎಂಡಿಎಂಎ’ ಪೂರೈಸುತ್ತಿದ್ದ ಮೂವರು ಆರೋಪಿಗಳನ್ನು ವೈಟ್‌ಫೀಲ್ಡ್‌ ಪೊಲೀಸರು ಬಂಧಿಸಿದ್ದಾರೆ.

ಕೇರಳದ ತ್ರಿಶೂರ್ ಜಿಲ್ಲೆಯ ಕರಾಲಾಂ ಗ್ರಾಮದ ಪವೀಶ್‌ (33), ಪಾಲ್ಕಾಡ್‌ನ ಅಭಿಜಿತ್‌ (25) ಹಾಗೂ ಕರಾಲಾಂನ ಶಫಿಸುದ್ದೀನ್ (29) ಬಂಧಿತರು.

‘ಪಟ್ಟಂದೂರು ಅಗ್ರಹಾರದ ಐಟಿಪಿಎಲ್‌ ಬಳಿಯ ಕೊರಿಯರ್‌ ಸರ್ವೀಸ್‌ಗೆ ಮೂವರು ಆರೋಪಿಗಳು ಗಿಫ್ಟ್‌ ಬಾಕ್ಸ್‌ನಲ್ಲಿ ಮಾದಕ ವಸ್ತು ಎಂಡಿಎಂಎ ಇಟ್ಟು ಕೊರಿಯರ್ ಮಾಡಲು ಬಂದಿದ್ದರು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಬಾಕ್ಸ್‌ನಲ್ಲಿ ಮಾದಕ ವಸ್ತುಗಳು ಇರುವುದು ಪತ್ತೆಯಾಗಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘138 ಗ್ರಾಂ ತೂಕದ ₹ 15 ಲಕ್ಷ ಮೌಲ್ಯದ ಎಂಡಿಎಂಎ ಮಾದಕ ವಸ್ತು, 4 ಮೊಬೈಲ್‌, ಗುಲಾಬಿ ಬಣ್ಣದ ಪೇಪರ್‌ನಿಂದ ಪ್ಯಾಕ್‌ ಮಾಡಿದ್ದ ಖಾಲಿ ರಟ್ಟಿನ ಬಾಕ್ಸ್‌, ಟಾಕಿಂಗ್‌ ಟಾಮ್‌ ಗೊಂಬೆ, 1 ಬೈಕ್‌ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಕೇರಳದಿಂದ ಬಂದಿದ್ದ ಮೂವರು ನಗರದಲ್ಲೇ ನೆಲೆಸಿ, ಕಾಲೇಜು ವಿದ್ಯಾರ್ಥಿಗಳು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ನೆಲೆಸಿರುವ ಗ್ರಾಹಕರಿಗೆ ಮಾದಕ ವಸ್ತು ಪೂರೈಸುತ್ತಿದ್ದರು. ಮಕ್ಕಳ ಆಟವಾಡುವ ಗೊಂಬೆಯನ್ನು ಖರೀದಿಸಿ, ಅದರ ಒಳಗೆ ಮಾದಕ ವಸ್ತುಗಳನ್ನಿಟ್ಟು ಗ್ರಾಹಕರಿಗೆ ಪೂರೈಸುತ್ತಿದ್ದರು. ಯಾರಿಗೂ ಸುಳಿವು ಸಿಗದಂತೆ ಕೆಲವು ತಿಂಗಳಿಂದ ಈ ರೀತಿಯಲ್ಲಿ ಮಾದಕ ವಸ್ತು ಪೂರೈಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.