ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರುವ ವಿಚಾರಣಾಧೀನ ಕೈದಿಗಳು ಹಾಗೂ ಸಜಾಬಂದಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಅಡಿ ಜೈಲು ವಾರ್ಡನ್‌ನನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಲ್ಲಪ್ಪ ಬಂಧಿತ ವಾರ್ಡನ್.
ಕಲ್ಲಪ್ಪ ಅವರು ರಾತ್ರಿ ಪಾಳಿಯಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ. ಕೈದಿಗಳಿಗೆ ತಂಬಾಕು ಉತ್ಪನ್ನ, ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ. ಬಂಧಿತನಿಂದ 100 ಗ್ರಾಂ ಹ್ಯಾಶಿಶ್ ಆಯಿಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
‘ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಯಾರಿಂದ ಮಾದಕ ವಸ್ತುಗಳನ್ನು ಖರೀದಿಸಿದ್ದ, ಯಾವ ಬ್ಯಾರಕ್‌ಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಮಾಜಿ ಸೈನಿಕರ ಕೋಟಾದಡಿ ಕಲ್ಲಪ್ಪ 2018ರಲ್ಲಿ ವಾರ್ಡನ್ ಆಗಿ ಕಾರಾಗೃಹ ಇಲಾಖೆಗೆ ಸೇರಿದ್ದ. ಕೆಲವು ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ. ಸೆ.7ರ ಸಂಜೆ ಕೆಲಸಕ್ಕೆ ಬರುವ ಸಂದರ್ಭದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಪ್ರವೇಶ ದ್ವಾರದ ಬಳಿ ಕಲ್ಲಪ್ಪನನ್ನು ಪರಿಶೀಲನೆಗೆ ಒಳಪಡಿಸಿದ್ದರು. ಈ ವೇಳೆ ಅವರ ಜೇಬಿನಲ್ಲಿ ತಂಬಾಕು ಉತ್ಪನ್ನ ಮತ್ತು ಹ್ಯಾಶಿಶ್ ಆಯಿಲ್ ಪತ್ತೆ ಆಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಇತ್ತೀಚೆಗೆ ದಾಳಿ ನಡೆಸಿದ್ದರು. ಆಗ ವಿವಿಧ ಬ್ಯಾರಕ್‌ಗಳಲ್ಲಿ ತಂಬಾಕು ಉತ್ಪನ್ನಗಳಾದ ಚೈನಿ, ಸ್ವಾಗತ್ ಗೋಲ್ಡ್, ಗಾಂಜಾ ಸೇದಲು ಕೈದಿಗಳು ಬಳಸುತ್ತಿದ್ದ ಕೊಳವೆಗಳು, ಚಾಕು, ಟ್ರಿಮರ್, ಕತ್ತರಿ, ಮೊಬೈಲ್ ಚಾರ್ಜರ್, ಬೆಂಕಿ ಪೊಟ್ಟಣ, ಲೈಟರ್, ಪ್ಲೇ ಕಾರ್ಡ್ಸ್, ಪ್ಲೇ ಕಾರ್ಡ್‌ನ ಆಟದ ಬಳಿಕ ಸಂಖ್ಯೆ ಬರೆದುಕೊಳ್ಳಲು ಕೈದಿಗಳು ಉಪಯೋಗಿಸಿದ್ದ ಪುಸ್ತಕ, ಬಿಸಿ ನೀರು ಕಾಯಿಸುವ ಕಾಯಲ್, ಆಯುಧಗಳು, ಕಬ್ಬಿಣದ ರಾಡುಗಳು ಪತ್ತೆಯಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.