ADVERTISEMENT

ಡ್ರಗ್ಸ್ ಮಾರಾಟ: ವಿಮಾನ ಸರಕು ತಪಾಸಣೆಕಾರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2022, 19:33 IST
Last Updated 17 ಡಿಸೆಂಬರ್ 2022, 19:33 IST
ಶಿಬು
ಶಿಬು   

ಬೆಂಗಳೂರು: ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರುತ್ತಿದ್ದ ಆರೋಪಿ ಸಿಬು ಟಿ. ಚಾಕ್ಕೊ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಕೇರಳದ ಸಿಬು, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಕಂಪನಿಯೊಂದರ ಸರಕು ಸಾಗಣೆ ವಿಭಾಗದಲ್ಲಿ ತಪಾಸಣೆಕಾರನಾಗಿ ಕೆಲಸ ಮಾಡುತ್ತಿದ್ದ. ಈತನನ್ನು ಬಂಧಿಸಿ ₹ 5 ಲಕ್ಷ ಮೌಲ್ಯದ 30 ಗ್ರಾಂ ಎಂಡಿಎಂಎ, ಎಲ್‌ಎಸ್‌ಡಿ ಕಾಗದದ 13 ಚೂರುಗಳು ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಐಷಾರಾಮಿ ಜೀವನ ನಡೆಸಲು ಬಯಸುತ್ತಿದ್ದ ಆರೋಪಿಗೆ ವೇತನ ಸಾಲುತ್ತಿರಲಿಲ್ಲ. ಅಕ್ರಮವಾಗಿ ಹಣ ಸಂಪಾದನೆ ಮಾಡಬೇಕೆಂದು ಡ್ರಗ್ಸ್ ಮಾರಾಟಕ್ಕೆ ಇಳಿದಿದ್ದ. ನೈಜೀರಿಯಾ ಪೆಡ್ಲರ್‌ ಪರಿಚಯ ಮಾಡಿಕೊಂಡಿದ್ದ ಆರೋಪಿ, ಅವರಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸುತ್ತಿದ್ದ. ನಂತರ, ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ಕಂಪನಿಗಳ ಉದ್ಯೋಗಿಗಳಿಗೆ ಡ್ರಗ್ಸ್ ಮಾರುತ್ತಿದ್ದರು’ ಎಂದು ತಿಳಿಸಿದರು.

ADVERTISEMENT

‘ಡ್ರಗ್ಸ್ ಮಾರಾಟದಿಂದ ಆರೋಪಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ. ಸದ್ಯ ಈತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.