ADVERTISEMENT

ಮನೆಯಲ್ಲಿ ಡ್ರಗ್ಸ್: ಮಹಿಳೆಯರೂ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 16:36 IST
Last Updated 16 ಜುಲೈ 2022, 16:36 IST
ಆರೋಪಿಗಳಿಂದ ಜಪ್ತಿ ಮಾಡಲಾದ ಡ್ರಗ್ಸ್, ಮೊಬೈಲ್
ಆರೋಪಿಗಳಿಂದ ಜಪ್ತಿ ಮಾಡಲಾದ ಡ್ರಗ್ಸ್, ಮೊಬೈಲ್   

ಬೆಂಗಳೂರು: ಮನೆಯಲ್ಲಿ ಡ್ರಗ್ಸ್ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪದಡಿ ಮಹಿಳೆಯರೂ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ರಸ್ತೆ ನಿವಾಸಿಗಳಾದ ಸೀತಾ, ಸುಮಿತ್ರಾ ಹಾಗೂ ಚಂದ್ರಶೇಖರ್ ಬಂಧಿತರು.

‘ಮನೆಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಮನೆ ಮೇಲೆ ದಾಳಿ ಮಾಡಿ, ಡ್ರಗ್ಸ್ ಮಾರಾಟ ಜಾಲ ಭೇದಿಸಿದ್ದಾರೆ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘₹ 90 ಲಕ್ಷ ಮೌಲ್ಯದ 940 ಗ್ರಾಂ ಹಶೀಷ್, 10 ಕೆ.ಜಿ ಗಾಂಜಾ, ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ. ಆರೋಪಿಗಳ ಜೊತೆ ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ’ ಎಂದು ತಿಳಿಸಿದರು.

ಆಂಧ್ರಪ್ರದೇಶದಲ್ಲಿ ಖರೀದಿ: ‘ಆರೋಪಿಗಳು ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ಡ್ರಗ್ಸ್ ಖರೀದಿಸಿ ನಗರಕ್ಕೆ ತರುತ್ತಿದ್ದರು. ಅದನ್ನೇ ಮನೆಯಲ್ಲಿಟ್ಟುಕೊಂಡು ಪರಿಚಯಸ್ಥ ಗ್ರಾಹಕರಿಗೆ ಮಾರುತ್ತಿದ್ದರು. ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಕೆಲ ಕಾರ್ಮಿಕರು ಆರೋಪಿಗಳ ಬಳಿ ಡ್ರಗ್ಸ್ ಖರೀದಿಸುತ್ತಿದ್ದರು’ ಎಂದು ಅಧಿಕಾರಿ ಹೇಳಿದರು.

‘ಆರೋಪಿ ಚಂದ್ರಶೇಖರ್ ಈ ಹಿಂದೆಯೂ ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ಈತನೇ ಮಹಿಳೆಯರ ಮೂಲಕ ಡ್ರಗ್ಸ್ ಮಾರಿಸುತ್ತಿದ್ದ ಮಾಹಿತಿ ಇದೆ. ಎನ್‌ಡಿಪಿಎಸ್ ಕಾಯ್ದೆಯಡಿ ಮೂವರ ವಿರುದ್ಧವೂ ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.