ADVERTISEMENT

ಡ್ರಗ್ಸ್ ಜಾಲ: ಮತ್ತೊಬ್ಬ ಆರೋಪಿ ವಿನಯ್‌ ಬಂಧನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 16:38 IST
Last Updated 21 ಡಿಸೆಂಬರ್ 2020, 16:38 IST
ವಿನಯ್‌ಕುಮಾರ್
ವಿನಯ್‌ಕುಮಾರ್   

ಬೆಂಗಳೂರು: ಅಂತರರಾಷ್ಟ್ರೀಯ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಆರೋಪದಡಿ ಮತ್ತೊಬ್ಬ ಆರೋಪಿ ವಿನಯ್‌ಕುಮಾರ್ ಎಂಬುವರನ್ನು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಡ್ರಗ್ಸ್ ಜಾಲದ ಬಗ್ಗೆ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಪ್ರಕರಣ ದಾಖಲಾದಾಗಿನಿಂದ ಪರಾರಿಯಾಗಿದ್ದ ಆರೋಪಿ ವಿನಯ್‌ಕುಮಾರ್ ಇದೀಗ ಸಿಸಿಬಿ ಬಲೆಗೆ ಬಿದ್ದಿದ್ದಾರೆ.

‘ಪ್ರಕರಣದ ಪ್ರಮುಖ ಆರೋಪಿ ವಿರೇನ್ ಖನ್ನಾ ಹಾಗೂ ಹಲವರ ಜೊತೆ ಒಡನಾಟವಿಟ್ಟುಕೊಂಡಿದ್ದ ವಿನಯ್‌ಕುಮಾರ್, ಗೋವಾ ಹಾಗೂ ಕೇರಳಕ್ಕೆ ಹೋಗಿ ತಲೆಮರೆಸಿಕೊಂಡು ಓಡಾಡುತ್ತಿದ್ದರು. ನಿರೀಕ್ಷಣಾ ಜಾಮೀನು ಕೋರಿ ವಿಶೇಷ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದ್ದರು. ಅದು ತಿರಸ್ಕೃತಗೊಂಡಿತ್ತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಡ್ರಗ್ಸ್ ಪಾರ್ಟಿ ಆಯೋಜನೆ ಹಾಗೂ ಅದಕ್ಕೆ ಗಣ್ಯರನ್ನು ಕರೆತರುವಲ್ಲಿ ವಿನಯ್‌ಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಡ್ರಗ್ಸ್ ಪೂರೈಕೆ ಮಾಡುತ್ತಿದ್ದವರ ಜೊತೆಯೂ ಆರೋಪಿ ನಂಟು ಹೊಂದಿದ್ದರು. ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಡಿ. 28ರವರೆಗೆ ಕಸ್ಟಡಿಗೆ ಪಡೆಯಲಾಗಿದೆ’ ಎಂದೂ ತಿಳಿಸಿದರು.

ಸಂಘಟಿತ ಅಪರಾಧ: ‘ಸಿನಿಮಾ, ಉದ್ಯಮ.. ಹೀಗೆ ನಾನಾ ಕ್ಷೇತ್ರದ ಆರೋಪಿಗಳು, ಒಂದೇ ಗುಂಪು ಕಟ್ಟಿಕೊಂಡಿದ್ದರು. ಅದರ ಮೂಲಕ ಡ್ರಗ್ಸ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಅದೇ ಪಾರ್ಟಿಗಳಲ್ಲಿ ವಿನಯ್‌ಕುಮಾರ್ ಸಹ ಭಾಗಿಯಾಗುತ್ತಿದ್ದರು’ ಎಂದು ಅಧಿಕಾರಿ ಹೇಳಿದರು.

‘ಬಳ್ಳಾರಿಯ ವಿನಯ್, ಕುಣಿಗಲ್ ಬಳಿ ಸ್ವಂತ ಕಲ್ಲಿನ ಕ್ವಾರಿ ನಡೆಸುತ್ತಿದ್ದರು. ಬೆಂಗಳೂರಿನ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ವಾಸವಿದ್ದರು. ಪಾರ್ಟಿಗೆ ಹೋಟೆಲ್‌ಗಳನ್ನೂ ಹುಡುಕುತ್ತಿದ್ದರು ಎಂಬ ಮಾಹಿತಿ ಇದೆ. ಜೊತೆಗೆ, ಅವರೇ ಡ್ರಗ್ಸ್ ತರಿಸುತ್ತಿದ್ದ ಬಗ್ಗೆಯೂ ಅನುಮಾನವಿದೆ. ವಿಚಾರಣೆಯಿಂದ ಮತ್ತಷ್ಟು ಮಾಹಿತಿ ಹೊರಬರಬೇಕಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.