ಮದ್ಯ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜು ಎದುರಿನ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು, ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಕಾರು ಹತ್ತಿಸಲು ಯತ್ನಿಸಿದ ಚಾಲಕನನ್ನು ಆಡುಗೋಡಿ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರು ಚಾಲಕ ನಂದುಕೃಷ್ಣ ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಭಾನುವಾರ ತಡರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದೆ.
‘ಮದ್ಯದ ಅಮಲಿನಲ್ಲಿ ಚಾಲಕ ಅಜಾಗರೂಕತೆಯಿಂದ ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ. ಅದನ್ನು ಗಮನಿಸಿದ ಕರ್ತವ್ಯನಿರತ ಪೊಲೀಸರು ಕಾರನ್ನು ತಡೆಯಲು ಯತ್ನಿಸಿದ್ದರು. ಈ ವೇಳೆ ಕಾರು ನಿಲ್ಲಿಸದೆ, ರಸ್ತೆಯಲ್ಲಿ ಅಡ್ಡಹಾಕಿದ್ದ ಬ್ಯಾರಿಕೇಡ್‌ಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಾನೆ. ಅದಾದ ಮೇಲೆ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ. ಕಾನ್‌ಸ್ಟೆಬಲ್ ಬಿ.ಎನ್.ಶ್ರೀನಿವಾಸ್ ಅವರ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದಾನೆ’ ಎಂದು ಪೊಲೀಸರು ಹೇಳಿದರು.
‘ಘಟನೆಯಲ್ಲಿ ಕೋರಮಂಗಲ ಠಾಣೆಯ ಬಿ.ಎನ್.ಶ್ರೀನಿವಾಸ್ ಅವರು ಗಾಯಗೊಂಡಿದ್ದಾರೆ. ಬಲಗಾಲಿನ ಮಂಡಿ, ಎಡಗಾಲಿನ ಪಾದಕ್ಕೆ ಗಾಯವಾಗಿದೆ. ಗಾಯಾಳು ಶ್ರೀನಿವಾಸ್ ಅವರನ್ನು ಅಕ್ಯೂರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಘಟನೆಯ ಬಳಿಕ ಕಾರಿನ ಬಾಗಿಲು ತೆರೆಯದೇ ಆರೋಪಿ ಒಳಗೇ ಕುಳಿತಿದ್ದ. ಕಾರಿನ ಗಾಜನ್ನು ಪೊಲೀಸರೇ ಒಡೆದು ಆತನನ್ನು ಹೊರಗೆ ಎಳೆದು ತಂದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಡರಾತ್ರಿ ಪಾರ್ಟಿ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಚಾಲಕ ಈ ವರ್ತನೆ ತೋರಿದ್ದಾನೆ ಎಂದು ಗೊತ್ತಾಗಿದೆ. ಚಾಲಕ ವಿಪರೀತ ಮದ್ಯ ಸೇವನೆ ಮಾಡಿದ್ದರಿಂದ ಪ್ರಜ್ಞೆಯೇ ಇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.