ADVERTISEMENT

ಬಿಜೆಪಿ, ಜೆಡಿಎಸ್‌ ಪ್ರಯತ್ನ ಖಂಡನೀಯ: ದ.ಸಂ.ಸ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 16:25 IST
Last Updated 26 ಆಗಸ್ಟ್ 2024, 16:25 IST
   

ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರವನ್ನು ರಾಜ್ಯಪಾಲರ ಮೂಲಕ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ–ಜೆಡಿಎಸ್‌ ಪಕ್ಷಗಳ ನಡೆ ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಹೇಳಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ‘ರಾಷ್ಟ್ರಪತಿಗಳ ನೇರ ಸುಪರ್ದಿಯಲ್ಲಿ ಕಾರ್ಯನಿರ್ವಹಿಸಬೇಕಾದ ರಾಜ್ಯಪಾಲರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ರಾಜ್ಯಪಾಲರು ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ನ್ಯಾಯಬದ್ಧವಾಗಿ ಪಡೆದುಕೊಂಡಿದ್ದಾರೆ. ಆದರೆ, ವಿರೋಧ ಪಕ್ಷಗಳ ಇದನ್ನು ಅಕ್ರಮವೆಂದು ಬಿಂಬಿಸುತ್ತಿವೆ. ತಳ ಸಮುದಾಯದ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹಣಿಯಲು ಪ್ರಯತ್ನಿಸುತ್ತಿವೆ’ ಎಂದು ದೂರಿದರು. 

ADVERTISEMENT

‘ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ತತ್ವ–ಸಿದ್ಧಾಂತಗಳಿಗೆ ಬಹಿರಂಗವಾಗಿ ಸವಾಲು ಹಾಕುವ ನಾಯಕರಾಗಿದ್ದಾರೆ. ವರ್ಣಾಶ್ರಮ, ಬ್ರಾಹ್ಮಣ್ಯವನ್ನು, ಮನುವಾದ ಹಾಗೂ ಆರ್‌ಎಸ್‌ಎಸ್‌ನ ಕುತಂತ್ರಗಳನ್ನು ಬಲವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಈ ಕಾರಣದಿಂದ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಕುತಂತ್ರ ಮಾಡಲಾಗಿದೆ’ ಎಂದು ಸಮಿತಿಯ ಮುಖಂಡ ಇಂದೂಧರ್ ಹೊನ್ನಾಪುರ ಹೇಳಿದರು.

ರಾಜ್ಯಪಾಲರ ಕ್ರಮ ವಿರೋಧಿಸಿ, ಸೆಪ್ಟೆಂಬರ್ 3ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.