ADVERTISEMENT

ದಲಿತರ ಮೇಲಿನ ದೌರ್ಜನ್ಯ ನಿಲ್ಲಲಿ: ರಾಜ್ಯ ದಲಿತ ಸಂಘರ್ಷ ಸಮಿತಿ

​ಪ್ರಜಾವಾಣಿ ವಾರ್ತೆ
Published 31 ಮೇ 2021, 20:54 IST
Last Updated 31 ಮೇ 2021, 20:54 IST

ಬೆಂಗಳೂರು: ಲಾಕ್‌ಡೌನ್‌ನಿಂದ ತೊಂದರೆಗೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ದಲಿತರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ರಾಜ್ಯ ದಲಿತ ಸಂಘರ್ಷ ಸಮಿತಿಯು ಜಿಲ್ಲಾಧಿಕಾರಿಯವರಿಗೆ ಸೋಮವಾರ ಮನವಿ ಸಲ್ಲಿಸಿತು.

ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ‘ಕೋವಿಡ್‌ ಎರಡನೇ ಅಲೆಯ ಬಗ್ಗೆ ತಜ್ಞರು ಮೊದಲೇ ಎಚ್ಚರಿಸಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದ ದೇಶದಲ್ಲಿ ಲಕ್ಷಾಂತರ ಜನ ಸಾವಿಗೀಡಾಗಬೇಕಾಯಿತು. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಮೂರನೇ ಅಲೆ ತಡೆಯುವ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದರು.

‘ರಾಜ್ಯದಲ್ಲಿ ದಿನೇ ದಿನೇ ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ರಕ್ಷಿಸಬೇಕಾದ ಕೆಲವು ಪೊಲೀಸರಿಂದಲೇ ದೌರ್ಜನ್ಯ ನಡೆದಿರುವುದು ನಾಚಿಕೆಗೇಡಿನ ಸಂಗತಿ. ಚಿಕ್ಕಮಗಳೂರಿನಲ್ಲಿ ದಲಿತ ಯುವಕನಿಗೆ ಮೂತ್ರ ಕುಡಿಸಿದ್ದು, ಬಸವನ ಬಾಗೇವಾಡಿ ಬಳಿ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಬಾವಿಗೆ ಎಸೆದಿರುವುದು ಹಲವು ಪ್ರಕರಣಗಳು ನಡೆದಿದ್ದರೂ ಅವುಗಳನ್ನು ಮುಚ್ಚು ಹಾಕುವ ಯತ್ನ ನಡೆಯುತ್ತಿದೆ. ಸರ್ಕಾರ ದಲಿತರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

ದಲಿತ ಮುಖಂಡ ಮಾವಳ್ಳಿ ಶಂಕರ್, ‘ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಈಡಾದ ಬಡವರಿಗೆ ಘೋಷಿಸಿರುವ ಪರಿಹಾರದ ಮೊತ್ತವನ್ನು ಹೆಚ್ಚು ಮಾಡಬೇಕು. ಜಿಲ್ಲಾ ಕೇಂದ್ರಗಳ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಸಾವಿಗೀಡಾದ ಕೋವಿಡ್‌ ರೋಗಿಗಳ ಕುಟುಂಬದವರಿಗೆ ₹10 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಮುಖಂಡ ವಿ. ನಾಗರಾಜ್, ‘ಕೋವಿಡ್ ಮತ್ತು ಕಪ್ಪು ಶಿಲೀಂಧ್ರದಿಂದ ತೊಂದರೆಗೀಡಾದ ಎಲ್ಲರಿಗೂ ಉಚಿತ ಲಸಿಕೆ ವಿತರಿಸಬೇಕು’ ಎಂದು ಆಗ್ರಹಿಸಿದರು.

ಜೀವನಹಳ್ಳಿ ಆರ್. ವೆಂಕಟೇಶ್, ಕ್ಯಾಲಸನಹಳ್ಳಿ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.