ADVERTISEMENT

ಜಿಮ್‌ಗಳತ್ತ ಸುಳಿಯದ ಜನ: ದುಡಿಮೆ ಇಲ್ಲದೆ ಮಾಲೀಕರು ಕಂಗಾಲು

ಬಾಡಿಗೆ ಕಟ್ಟಲು ಸಾಲ ಮಾಡಬೇಕಾದ ಸ್ಥಿತಿ

ಜಿ.ಶಿವಕುಮಾರ
Published 20 ಮಾರ್ಚ್ 2022, 4:20 IST
Last Updated 20 ಮಾರ್ಚ್ 2022, 4:20 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕೋವಿಡ್‌ ಕಡಿಮೆಯಾದ ನಂತರ ಜಿಮ್‌ಗಳ ಪುನರಾರಂಭಕ್ಕೆ ಅನುಮತಿ ಸಿಕ್ಕಿತ್ತು. ಆಗ ತುಸು ನಿರಾಳರಾಗಿದ್ದ ಮಾಲೀಕರು ಈಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿ ಸಹಜತೆಯತ್ತ ಮರಳುತ್ತಿದ್ದರೂ ಜನರು ಜಿಮ್‌ಗಳತ್ತ ಸುಳಿಯುತ್ತಿಲ್ಲ. ಹೀಗಾಗಿ ದುಡಿಮೆ ಇಲ್ಲದೆ ಅವರ ಬದುಕು ದುಸ್ತರವಾಗಿದೆ.

ಕೋವಿಡ್‌ಗೂ ಮುನ್ನ ನಗರದಲ್ಲಿ ಸಾವಿರಾರು ಜಿಮ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಪೈಕಿ ಶೇ 40ರಷ್ಟು ಜಿಮ್‌ಗಳಿಗೆ ಈಗ ಬೀಗ ಬಿದ್ದಿದೆ. ಲಕ್ಷಗಟ್ಟಲೆ ಬಂಡವಾಳ ಹಾಕಿದ್ದವರು ಆದಾಯವೇ ಇಲ್ಲದೆ ಕಂಗಾಲಾಗಿದ್ದಾರೆ. ಜಿಮ್‌ಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ತರಬೇತುದಾರರೂ ದಿಕ್ಕು ತೋಚದಾಗಿದ್ದಾರೆ.

‘ಮೂರು ವರ್ಷಗಳ ಹಿಂದೆ ₹40 ಲಕ್ಷ ಬಂಡವಾಳ ಹಾಕಿ ಜಿಮ್‌ ಆರಂಭಿಸಿದ್ದೆ. ಮೊದಲ ವರ್ಷ ದುಡಿಮೆ ಚೆನ್ನಾಗಿತ್ತು. ಕಾಲಿಡಲೂ ಜಾಗವಿಲ್ಲದಷ್ಟು ಜನರು ಸೇರುತ್ತಿದ್ದರು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದುದರಿಂದಜೀವನವೂ ಸಂತಸಮಯವಾಗಿತ್ತು. ಕೋವಿಡ್‌ ನಮ್ಮೆಲ್ಲಾ ಖುಷಿ ಹಾಗೂ ಕನಸನ್ನು ಕಸಿದುಕೊಂಡಿತು. ಸೋಂಕು ಪಸರಿಸುವ ಆತಂಕದಿಂದಾಗಿ ಜಿಮ್‌ಗಳನ್ನು ಮುಚ್ಚಿಸಿದಾಗ ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು’ ಎಂದು ಶ್ರೀನಿವಾಸನಗರದ ‘ಫಿಟ್‌ ಆ್ಯಂಡ್‌ ಫಿಸಿಕ್‌’ ಜಿಮ್‌ ಮಾಲೀಕ ನಾಗಭೂಷಣ್‌ ತಿಳಿಸಿದರು.

ADVERTISEMENT

‘ಕೋವಿಡ್‌ ಕಡಿಮೆಯಾಗಿ ಜಿಮ್‌ಗಳ ಪುನರಾರಂಭಕ್ಕೆ ಸರ್ಕಾರ ಅನುಮತಿ ನೀಡಿದಾಗ ಬದುಕು ಸರಿದಾರಿಗೆ ಬರುವ ಆಸೆ ಚಿಗುರೊಡೆದಿತ್ತು. ಆ ನಿರೀಕ್ಷೆ ಹುಸಿಯಾಗಿದೆ. ಎರಡು ತಿಂಗಳಿಂದ ದುಡಿಮೆಯೇ ಇಲ್ಲ. ಜಿಮ್ ಬಾಡಿಗೆಯೂ ಕಟ್ಟಿಲ್ಲ. ಮಾಲೀಕರು ಪದೇ ಪದೇ ಕರೆ ಮಾಡಿ ಹಿಂಸಿಸುತ್ತಿದ್ದಾರೆ. ₹2 ಲಕ್ಷ ಹಣ ಎಲ್ಲಿಂದ ತರಬೇಕು ಎಂಬುದೇ ತಿಳಿಯುತ್ತಿಲ್ಲ. ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಅಲೆಯುವುದು ತಪ್ಪಿಲ್ಲ’ ಎಂದು ಅಳಲು ತೋಡಿಕೊಂಡರು.

ವೈಟ್‌ಫೀಲ್ಡ್‌ನ ಫೋರಂ ಮಾಲ್‌ನಲ್ಲಿರುವ ‘ಫ್ಲೆಜ್‌ ಫಿಟ್‌ನೆಸ್‌’ನ ಮಾಲೀಕ ಬಾಲಕೃಷ್ಣ, ‘ಕೋವಿಡ್‌ಗೂ ಮುನ್ನ ಪ್ರತಿದಿನ ಬೆಳಿಗ್ಗೆ 40 ರಿಂದ 50 ಮಂದಿ ತರಬೇತಿಗೆ ಬರುತ್ತಿದ್ದರು. ಈಗ ಇದು 10ಕ್ಕೆ ಇಳಿದಿದೆ. ಬಾಡಿಗೆ ಹೇಗೆ ಕಟ್ಟಬೇಕು, ಕುಟುಂಬದವರನ್ನು ಹೇಗೆ ಸಾಕಬೇಕು ಎಂಬ ಚಿಂತೆ ಶುರುವಾಗಿದೆ’ ಎಂದರು.

‘ಈ ತಿಂಗಳ ಅಂತ್ಯದಲ್ಲಿ ಪರೀಕ್ಷೆಗಳು ಶುರುವಾಗುತ್ತವೆ. ಬಳಿಕ ಬೇಸಿಗೆ ರಜೆ ಬರುತ್ತದೆ. ಆಗ ಎಲ್ಲರೂ ಪ್ರವಾಸ ಕೈಗೊಳ್ಳುತ್ತಾರೆ. ಹೀಗಾಗಿ ಇನ್ನೂ ಮೂರು ತಿಂಗಳು ದುಡಿಮೆಗೆ ಹೊಡೆತ ಬೀಳುವುದು ನಿಶ್ಚಿತ. ಜುಲೈ ನಂತರ ಪರಿಸ್ಥಿತಿ ಸುಧಾರಿಸಬಹುದು. ಅಲ್ಲಿಯವರೆಗೂ ಕಾದು ನೋಡಬೇಕಷ್ಟೇ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.