ADVERTISEMENT

‘ಟಿಡಿಆರ್‌’ ಹಗರಣ: ಇ.ಡಿ ತನಿಖೆ?

ಎಸಿಬಿಯಿಂದ ಮಾಹಿತಿ ಸಂಗ್ರಹಿಸುತ್ತಿರುವ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 19:34 IST
Last Updated 4 ಜೂನ್ 2019, 19:34 IST

ಬೆಂಗಳೂರು: ಕೆಲವು ಪ್ರಭಾವಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಭಾಗಿಯಾಗಿದ್ದಾರೆನ್ನಲಾದ ಬಹು ಕೋಟಿ ಮೌಲ್ಯದ ‘ಅಭಿವೃದ್ಧಿ ಹಕ್ಕು ವರ್ಗಾವಣೆ’ (ಟಿಡಿಆರ್‌) ವಂಚನೆ ಪ್ರಕರಣ’ದ ತನಿಖೆಯನ್ನು ಕೈಗೆತ್ತಿಕೊಳ್ಳುವ ಕುರಿತು ಜಾರಿ ನಿರ್ದೇಶನಾಲಯ (ಇ.ಡಿ) ಗಂಭೀರವಾಗಿ ಪರಿಶೀಲಿಸುತ್ತಿದೆ.

ಬಿಬಿಎಂ‍‍ಪಿ ರಸ್ತೆಗಳ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಕಟ್ಟಡ, ಜಮೀನಿಗೆ ಪರ್ಯಾಯವಾಗಿ ನೀಡಿರುವ ‘ಅಭಿವೃದ್ಧಿ ಹಕ್ಕು ವರ್ಗಾವಣೆ ಪತ್ರ’ಗಳನ್ನು (ಟಿಡಿಆರ್‌ಸಿ) ಖರೀದಿಸಿರುವ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಅವುಗಳನ್ನು ಎಲ್ಲೆಂದರಲ್ಲಿ ಬಳಸಿ ಕಟ್ಟಡ ಕಟ್ಟಿರುವ ಕುರಿತು ಈಗಾಗಲೇ ‘ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ) ತನಿಖೆ ನಡೆಸುತ್ತಿದೆ. ತನಿಖೆ ಒಂದು ಹಂತಕ್ಕೆ ತಲುಪಿದ ಬಳಿಕ ಇ.ಡಿ ತನಿಖೆ ಆರಂಭಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಅಧಿಕಾರಿಗಳಿಬ್ಬರನ್ನು ಎಸಿಬಿಗೆ ಕಳುಹಿಸಿರುವ ಇ.ಡಿ ಅಗತ್ಯ ಮಾಹಿತಿ ಸಂಗ್ರಹಿಸುತ್ತಿದೆ. ಸಂಪೂರ್ಣ ಮಾಹಿತಿ ಕಲೆ ಹಾಕಿದ ನಂತರ ತನಿಖೆಯ ಸ್ವರೂಪ ನಿರ್ಧರಿಸಲಾಗುವುದು. ತೆರಿಗೆ ವಂಚನೆ, ಬೇನಾಮಿ ವ್ಯವಹಾರ ಕುರಿತು ತನಿಖೆ ನಡೆಯುವ ಸಂಭವವಿದೆ ಇದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ADVERTISEMENT

ಟಿಡಿಆರ್ ಹಗರಣಕ್ಕೆ ಎಸಿಬಿ ಕೈಹಾಕುವವರೆಗೆ ಇದೊಂದು ‘ಭಾರಿ ಹಗರಣ’ ಎಂಬುದರ ಅರಿವು ಬಿಬಿಎಂಪಿ ಅಧಿಕಾರಿಗಳು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹಾಗೂ ಮಧ್ಯವರ್ತಿಗಳನ್ನು ಬಿಟ್ಟು ಬೇರೆಯವರಿಗಿರಲಿಲ್ಲ. ಅಚ್ಚರಿ ಸಂಗತಿ ಎಂದರೆ ತನಿಖೆ ಶುರುವಾಗುತ್ತಿದ್ದಂತೆ ಟಿಡಿಆರ್‌ಸಿ ಕಡತಗಳು ಬಿಬಿಎಂಪಿ ಕಪಾಟಿನೊಳಗಿಂದ ಕಣ್ಮರೆಯಾಗಿವೆ. ಅವುಗಳನ್ನು ಪತ್ತೆ ಹಚ್ಚಲು ತನಿಖಾಧಿಕಾರಿಗಳು ಕಸರತ್ತು ನಡೆಸುತ್ತಿದ್ದಾರೆ.

ರಸ್ತೆಗಳ ವಿಸ್ತರಣೆಗೆ ವಶಪಡಿಸಿಕೊಂಡ ಜಮೀನು ಹಾಗೂ ಕಟ್ಟಡಕ್ಕೆ ಬದಲಾಗಿ ಟಿಡಿಆರ್‌ಸಿ ನೀಡುವ ಪದ್ಧತಿ 2005ರಿಂದ ಜಾರಿಗೆ ಬಂದಿದ್ದು, 10 ವರ್ಷ ಬಿಬಿಎಂಪಿ ನಿಯಂತ್ರಣದಲ್ಲಿತ್ತು. 2015ರಲ್ಲಿ ಇದನ್ನು ಬಿಡಿಎಗೆ ಹಸ್ತಾಂತರಿಸಲಾಯಿತು. ಹತ್ತು ವರ್ಷಗಳಲ್ಲಿ ಬಿಬಿಎಂಪಿ 22.08 ಲಕ್ಷ ಚದರಡಿ ಟಿಡಿಆರ್‌ಸಿ ವಿತರಿಸಿದೆ.

ಭಟ್ಟರಹಳ್ಳಿ– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗಾಗಿ ವಶಪಡಿಸಿಕೊಂಡಿದ್ದ ಜಮೀನೊಂದಕ್ಕೆ ನೀಡಿರುವ ಟಿಡಿಆರ್‌ಸಿ ವರ್ಗಾವಣೆಯಲ್ಲಿ ನಡೆದಿದೆ ಎನ್ನಲಾದ ವಂಚನೆ ಸಂಬಂಧ ಬಂದಿದ್ದ ದೂರನ್ನು ಆಧರಿಸಿ ಎಸಿಬಿ ಅಧಿಕಾರಿಗಳು ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಲಾಲ್‌ ಹಾಗೂ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿದರು. ಈ ಹಗರಣದಲ್ಲಿ ಇವರೆಲ್ಲರೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಟಿಡಿಆರ್‌ ವಹಿವಾಟು ನಡೆಸುವ ಉದ್ದೇಶದಿಂದ ಕಬ್ಬನ್‌ಪೇಟೆಯ ಬನಶಂಕರಿ ಮಹಿಳಾ ಸಹಕಾರಿ ಬ್ಯಾಂಕ್‌ನಲ್ಲಿ 174ಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ. ಬಹುತೇಕ ಖಾತೆಗಳನ್ನು ಒಂದು ಸಲ ವಹಿವಾಟು ನಡೆಸಿದ ಬಳಿಕ ಸ್ಥಗಿತಗೊಳಿಸಲಾಗಿದೆ. ಅಲ್ಲದೆ. ಕಡಿಮೆ ಬೆಲೆ ಇರುವ ಪ್ರದೇಶಗಳ ಟಿಡಿಆರ್‌ಸಿಗಳನ್ನು ಅತ್ಯಧಿಕ ಬೆಲೆ ಹೊಂದಿರುವ ಪ್ರದೇಶಗಳಲ್ಲಿ ಬಳಸಲಾಗಿದೆ ಎಂಬ ಸಂಗತಿ ತನಿಖೆಯಿಂದ ಬಯಲಿಗೆ ಬಂದಿದೆ. ಈ ಎಲ್ಲ ಅಂಶಗಳನ್ನು ಇ.ಡಿ ಗಣನೆಗೆ ತೆಗೆದುಕೊಂಡಿದೆ ಎಂದೂ ಮೂಲಗಳು ಹೇಳಿವೆ.

ಕೃಷ್ಣಲಾಲ್‌ ವಿಚಾರಣೆಗೆ ಹಾಜರಾಗಿಲ್ಲ!

ಟಿಡಿಆರ್‌ ವಂಚನೆ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾದ ಬಿಡಿಎ ಎಇಇ ಕೃಷ್ಣಲಾಲ್‌ ಒಂದು ವಾರದಿಂದ ಎಸಿಬಿ ವಿಚಾರಣೆಗೆ ಹಾಜರಾಗಿಲ್ಲ. ನಾಪತ್ತೆ ಆಗಿರುವ ಈ ಅಧಿಕಾರಿಯ ಬಂಧನಕ್ಕೆ ಎಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ.

‘ಕೃಷ್ಣಲಾಲ್‌ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನನ್ನುವಿಶೇಷ ಲೋಕಾಯುಕ್ತ ಕೋರ್ಟ್‌ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಕಳೆದ ಸೋಮವಾರ ರದ್ದುಪಡಿಸಿದಾಗಿನಿಂದ ಎಇಇ ತಲೆ ಮರೆಸಿಕೊಂಡಿದ್ದಾರೆ. ಈ ಮಧ್ಯೆ, ಜಾಮೀನು ರದ್ದುಪಡಿಸಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅವರು ಅರ್ಜಿ ಸಲ್ಲಿಸಿದ್ದಾರೆ’ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಈ ಪ್ರಕರಣದಲ್ಲಿ ಉಳಿದ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಬೇರೆ ಕೆಲವು ಬ್ಯಾಂಕ್‌ಗಳಲ್ಲೂ ಟಿಡಿಆರ್ ವಹಿವಾಟು ನಡೆದಿದ್ದು, ಮಾಹಿತಿ ಕೇಳಲಾಗಿದೆ ಎಂದೂ ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.