ಬೆಂಗಳೂರು: ಯೂನಿಯನ್ ಬ್ಯಾಂಕ್‌ನಿಂದ ಸಾಲ ಪಡೆದು, ಮರುಪಾವತಿ ಮಾಡದೆ ಒಟ್ಟು ₹122 ಕೋಟಿ ವಂಚಿಸಿದ ಪ್ರಕರಣದಲ್ಲಿ ಅಸೋಸಿಯೇಟ್ ಲಂಬರ್ಸ್ ಪ್ರೈವೆಟ್ ಲಿಮಿಟೆಡ್ (ಎಎಲ್‌ಪಿಎಲ್) ವಿರುದ್ಧ ಜಾರಿ ನಿರ್ದೇಶನಾಲಯವು ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ.
ಯೂನಿಯನ್ ಬ್ಯಾಂಕ್‌ನಿಂದ (ಹಿಂದೆ ಕಾರ್ಪೊರೇಷನ್ ಬ್ಯಾಂಕ್) ಎಎಲ್‌ಪಿಎಲ್ ₹60 ಕೋಟಿಯಷ್ಟು, ಭದ್ರತೆ ಇಲ್ಲದ ಸಾಲ ಪಡೆದಿತ್ತು. ಮರುಪಾವತಿ ಮಾಡದೇ ಇದ್ದ ಕಾರಣಕ್ಕೆ ಅಸಲು, ಬಡ್ಡಿ, ದಂಡ ಮತ್ತು ವಸೂಲಿ ಶುಲ್ಕವೂ ಸೇರಿ ಸಾಲದ ಮೊತ್ತ ₹122 ಕೋಟಿಯಾಗಿತ್ತು.
ಸಾಲದ ಹಣವನ್ನು ಬೇರೊಂದು ಕಂಪನಿಗೆ ವರ್ಗಾಯಿಸಿ, ಕಂಪನಿಯ ನಿರ್ದೇಶಕರು ಜಮೀನು ಮತ್ತು ಕಟ್ಟಡಗಳನ್ನು ಖರೀದಿಸಿದ್ದರು. ಜತೆಗೆ ಸಾಲದ ಹಣದಲ್ಲಿ ಷೇರುಗಳನ್ನೂ ಖರೀದಿಸಿದ್ದರು. ಎಲ್ಲ ಸ್ವತ್ತು ಚೆನ್ನೈ ಪ್ರವಾಹದಲ್ಲಿ ಕೊಚ್ಚಿಹೋಯಿತು ಎಂದು ದಾಖಲೆ ಸಲ್ಲಿಸಿದ್ದರು.
ಸಾಲದ ಅಸಲನ್ನು ಯೂನಿಯನ್ ಬ್ಯಾಂಕ್ ‘ವಸೂಲಾಗದ ಸಾಲ– ಎನ್‌ಪಿಎ’ ಎಂದು ವರ್ಗೀಕರಿಸಿತ್ತು. ಯೂನಿಯನ್ ಬ್ಯಾಂಕ್‌ನ ದೂರಿನ ಆಧಾರದಲ್ಲಿ ಸಿಬಿಐ ತನಿಖೆ ಆರಂಭಿಸಿತ್ತು. ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಹ ಪ್ರಕರಣ ದಾಖಲಿಸಿತ್ತು. ಬಹುಕೋಟಿ ಪ್ರಕರಣವಾಗಿದ್ದ ಕಾರಣ, ಜಾರಿ ನಿರ್ದೇಶನಾಲಯವು (ಇ.ಡಿ) ಇಸಿಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.
ಈ ಪ್ರಕರಣದಲ್ಲಿ ಇ.ಡಿಯು ಈವರೆಗೆ ₹47 ಕೋಟಿ ಮೊತ್ತದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಆರೋಪಿಗಳು ಸಂಚು ರೂಪಿಸಿ, ಸಾಲದ ಹಣವನ್ನು ಹೇಗೆಲ್ಲಾ ಲಪಟಾಯಿಸಿದ್ದಾರೆ ಎಂಬುದರ ವಿವರವನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಾಸಿಕ್ಯೂಷನ್ ದೂರಿನಲ್ಲಿ ಇ.ಡಿ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.