ನಗರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ. ತಿಮ್ಮೇಗೌಡ ಮತ್ತು ಎಚ್. ಎಂ. ರೇವಣ್ಣ ಅವರು ಬ್ರಹ್ಮಶ್ರೀ ನಾರಾಯಣಗುರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಈಡಿಗ, ಬಿಲ್ಲವ ಸಮುದಾಯದ ಬೇಡಿಕೆಯಂತೆ ಪ್ರತ್ಯೇಕ ನಿಗಮದ ಆರಂಭಕ್ಕೆ ಆದಷ್ಟು ಬೇಗ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎರಡು ವರ್ಷದ ಹಿಂದೆಯೇ ಪ್ರತ್ಯೇಕ ನಿಗಮ ರಚನೆ ಘೋಷಣೆಯಾಗಿದೆ. ಇದಕ್ಕಾಗಿ ₹ 10 ಕೋಟಿ ತೆಗೆದಿರಿಸಲಾಗಿದೆ. ಆದರೆ ಕಂಪನಿ ಕಾಯ್ದೆ ಪ್ರಕಾರ ನೋಂದಣಿ ಆಗುವುದು ವಿಳಂಬವಾಗಿದ್ದರಿಂದ ನಿಗಮ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲು ತೊಡಕಾಗಿದೆ ಎಂದು ಹೇಳಿದರು.
‘ಸಮುದಾಯದಿಂದಲೇ ಪ್ರತ್ಯೇಕ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು ಆರಂಭ, ಹಾಸ್ಟೆಲ್‌ಗೆ ಜಾಗ, ಅನುದಾನ ಸೇರಿದಂತೆ ಒಂಬತ್ತು ಬೇಡಿಕೆಗಳಲ್ಲಿ ಐದು ಬೇಡಿಕೆಗೆ ಸಮ್ಮತಿ ನೀಡಲಾಗಿದೆ. ಈ ಕುರಿತ ಆದೇಶ ಜಾರಿಗೊಳಿಸಲು ಗಮನ ವಹಿಸುವೆ’ ಎಂದು ಭರವಸೆ ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಜಾತಿ ತಾರತಮ್ಯ ಮಾಡದೇ ಪ್ರತಿಯೊಬ್ಬರು ಗೌರವದಿಂದ ಬದುಕುವಂತಾಗಬೇಕು ಎಂದು ನಾರಾಯಣಗುರುಗಳು ಹೋರಾಡಿದರು. ಅವರ ಚಿಂತನೆಗಳು ಬರೀ ಮಾತಿಗೆ ಸೀಮಿತವಾಗದೇ ಸಮಾಜದ ಬದಲಾವಣೆಗೆ ದಾರಿ ಮಾಡಿಕೊಡಲಿ ಎಂದರು.
ಉಪನ್ಯಾಸ ನೀಡಿದ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ನಾರಾಯಣಗುರುಗಳು ಹುಟ್ಟು ಹಾಕಿದ ಸಾಮಾಜಿಕ, ಆರ್ಥಿಕ ಹೋರಾಟದ ಕ್ರಾಂತಿಯ ಫಲ ಕೇರಳಕ್ಕೆ ಮಾತ್ರವಲ್ಲದೇ ಕರ್ನಾಟಕಕ್ಕೂ ಸಿಕ್ಕಿದೆ. ಬರೀ ಧಾರ್ಮಿಕ ಹೋರಾಟದ ಬದಲು ಅಹಿಂದ ವರ್ಗಗಳಿಗೆ ಬಲ ತುಂಬಿ ಅವರ ಬದುಕಿನಲ್ಲಿ ಬದಲಾವಣೆ ಮಾಡಿದ್ದು, ಹಲವು ಸಮುದಾಯಗಳಿಗೆ ಬಲ ತುಂಬಿದೆ ಎಂದರು.
ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಅವರು ಸಮುದಾಯದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತನಂದ ಸ್ವಾಮೀಜಿ, ನಿಟ್ಟೂರು ಮಠದ ರೇಣುಕಾನಂದ ಸ್ವಾಮೀಜಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಬಿಲ್ಲವ ಸಮಾಜದ ಅಧ್ಯಕ್ಷ ಎಂ.ವೇದಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎಂ.ವಿ.ವೆಂಕಟೇಶ್, ನಿರ್ದೇಶಕಿ ಕೆ.ಎಂ.ಗಾಯತ್ರಿ ಹಾಜರಿದ್ದರು. ಇದಕ್ಕೂ ಮುನ್ನ ಆಕರ್ಷಕ ಮೆರವಣಿಗೆ ನಡೆಯಿತು.
’ಸರ್ವರಿಗೂ ಗ್ಯಾರಂಟಿ‘:
‘ನಮ್ಮ ಸರ್ಕಾರ 28 ತಿಂಗಳಿನಲ್ಲಿ ಗ್ಯಾರಂಟಿ ಯೋಜನೆಗಳಿಗೆ ₹ 1 ಲಕ್ಷ ಕೋಟಿ ವಿನಿಯೋಗ ಮಾಡಿದೆ. ಒಂದೇ ಜಾತಿಗಾಗಿ ಈ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಎಲ್ಲ ಜಾತಿ ಧರ್ಮದವರಲ್ಲದೇ ಎಲ್ಲ ಪಕ್ಷದವರೂ ಉಪಯೋಗ ಪಡೆಯುತ್ತಿದ್ದಾರೆ. ಜಾತಿಗಿಂತ ನೀತಿ ಮೂಲಕ ಯೋಜನೆ ಜಾರಿಗೊಳಿಸುತ್ತಿದ್ದೇವೆ. ನನ್ನ ರಾಜಕೀಯ ಜೀವನವೇ ಸಾಮಾಜಿಕ ನ್ಯಾಯ ಜಾರಿಗೆ ಮೀಸಲಾಗಿದೆ’ ಎಂದು ಸಿದ್ದರಾಮಯ್ಯ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.