ನಗರದಲ್ಲಿ ಬುಧವಾರ ‘ಕರ್ನಾಟಕ ಪತ್ರಕರ್ತೆಯರ ಸಂಘ’ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ ಉಪಸಂಪಾದಕಿ ಅನಿತಾ ಎಚ್., ಪತ್ರಕರ್ತೆ ಗಾಯತ್ರಿ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. –ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಇಂದು ಮಹಿಳೆಯರಿಗೆ ಶಿಕ್ಷಣ ದೊರೆಯುತ್ತಿದೆ. ಆದರೆ, ಬಹಳಷ್ಟು ಮಂದಿ ಸಶಕ್ತರಾಗಲು ಹಿಂಜರಿಯುತ್ತಿದ್ದಾರೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ನಾಗಾಂಬಿಕಾ ದೇವಿ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಪತ್ರಕರ್ತೆಯರ ಸಂಘ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ, ಪತ್ರಕರ್ತೆಯರು, ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನಕ್ಷರಸ್ಥ ಹೆಣ್ಣು ಮಕ್ಕಳಿಗೆ ಇರುವ ಧೈರ್ಯ ವಿದ್ಯಾವಂತ ಹೆಣ್ಣುಮಕ್ಕಳಲ್ಲಿ ಕಾಣುತ್ತಿಲ್ಲ. ವಿದ್ಯೆಯ ಜೊತೆಗೆ ಸಶಕ್ತರಾಗುವುದನ್ನು ಕಲಿಯಬೇಕು. ಐಎಎಸ್ ಅಧಿಕಾರಿಯಾಗಲಿ, ಪತ್ರಕರ್ತರಾಗಲಿ ಕೆಲಸದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ ಎಂಬುದಿಲ್ಲ. ಕೆಲಸ ಮಾಡುವ ಸ್ಥಳಗಳಲ್ಲಿ ಈ ತಾರತಮ್ಯ ಏಕಿರಬೇಕು ಎಂದು ಪ್ರಶ್ನಿಸಿದರು.
ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಬೃಂದಾ ಅಡಿಗೆ ಮಾತನಾಡಿ, ‘ಎಲ್ಲ ಧರ್ಮಗಳ ಅಡಿಪಾಯ, ಮನೋಧರ್ಮ, ಚಿಂತನೆ ಪುರುಷ ಪ್ರಧಾನವಾಗಿದೆ. ಜನರ ಯೋಚನೆ, ವರ್ತನೆ ಮತ್ತು ಭಾಷೆಯಲ್ಲಿ ಇದು ವ್ಯಕ್ತವಾಗುತ್ತಿದೆ. ಬೈಗುಳದ ಭಾಷೆ ನೋಡಿದರೂ ಸ್ತ್ರೀ ನಿಂದನೆಯ ಭಾಷೆಯನ್ನೇ ಬಳಸಲಾಗುತ್ತದೆ. ಭಾಷೆಯ ಬಳಕೆಯ ರೀತಿ ಬದಲಾಗಬೇಕು’ ಎಂದು ತಿಳಿಸಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ ಗಾಂಧಿ ಮಾತನಾಡಿ, ‘ಮಾನಸಿಕ ಸಂಕೋಲೆಯಿಂದ ಬಿಡುಗಡೆಯಾಗದೇ ಸಶಕ್ತರಾಗಲು ಸಾಧ್ಯವಿಲ್ಲ. ಇದು ಪುರುಷ ಮತ್ತು ಮಹಿಳೆ ಎರಡೂ ಕಡೆಯಿಂದ ಆಗಬೇಕು. ವೈಚಾರಿಕತೆ ಮತ್ತು ಪ್ರಜಾಸತ್ತಾತ್ಮಕ ಚಿಂತನೆಯಿಂದ ಸಮಾನತೆ ಸಾಧ್ಯ’ ಎಂದರು.
ಪತ್ರಕರ್ತೆ ಗಾಯತ್ರಿ ಚಂದ್ರಶೇಖರ್, ಪ್ರಜಾವಾಣಿ ಉಪಸಂಪಾದಕಿ ಅನಿತಾ ಎಚ್., ಚಂದ್ರಯಾನ–3 ಇಸ್ರೊ ಡೆಪ್ಯುಟಿ ಪ್ರಾಜೆಕ್ಟ್ ಡೈರೆಕ್ಟರ್ ರೂಪಾ ಎಂ.ವಿ., ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಕಾತ್ಯಾಯಿನಿ ಚಾಮರಾಜ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಸಚಿವ ಟಿ. ಜವರೇಗೌಡ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಎನ್. ನರಸಿಂಹಮೂರ್ತಿ, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿ ಮಂಜುಶ್ರೀ ಕಡಕೋಳ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.