ಸಾಂದರ್ಭಿಕ ಚಿತ್ರ
ಬೆಂಗಳೂರು: ‘ಮಕ್ಕಳಿಗೆ ಉತ್ತಮ ವಿದ್ಯಾರ್ಜನೆ ಮತ್ತು ಜ್ಞಾನ ಸಂಪಾದನೆಗೆ ತಂದೆ, ತಾಯಂದಿರು ಸಹಕಾರ ನೀಡಬೇಕು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್.ದೇವದಾಸ್ ಹೇಳಿದರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕ/ಸಾಧಕಿಯರು, ಬಿಬಿಎಂಪಿ ಅಧಿಕಾರಿ, ನೌಕರರಿಗೆ ‘ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
‘ಅಂಬೇಡ್ಕರ್ ಅವರು ‘ಜ್ಞಾನ ಸಂಪಾದನೆಗೆ ಶಿಕ್ಷಣ’ ಎಂಬ ಮಂತ್ರವನ್ನು ಎಲ್ಲರಿಗೂ ಹಾಕಿಕೊಟ್ಟರು. ನ್ಯಾಯಾಂಗ ಕ್ಷೇತ್ರದಲ್ಲಿ ಸಿವಿಲ್ ನ್ಯಾಯಧೀಶರ ನೇಮಕಾತಿ ಆಯ್ಕೆಯಲ್ಲಿ ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿ ಹೆಚ್ಚು ಆಯ್ಕೆಯಾಗುತ್ತಿದ್ದಾರೆ. ಮೆರಿಟ್ ಮೇಲೆ ವೈದ್ಯ, ಎಂಜಿನಿಯರಿಂಗ್ ಸೀಟ್ ಪಡೆದು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಅಂಬೇಡ್ಕರ್ ಕಂಡ ಕನಸು ನನಸು ಮಾಡುತ್ತಿದ್ದಾರೆ’ ಎಂದರು.
ಚಲನಚಿತ್ರ ನಟ ಶರಣ್ ಮಾತನಾಡಿ, ‘ಅಂಬೇಡ್ಕರ್ ಅವರ ಆದರ್ಶ ಸಿದ್ದಾಂತವನ್ನು ಎಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಿ. ಪ್ರಪಂಚ ಕಂಡ ಅಮೂಲ್ಯರತ್ನ ಅಂಬೇಡ್ಕರ್ ಹುಟ್ಟಿದ ನಾಡಿನಲ್ಲಿ ನಾವು ಹುಟ್ಟುವುದಕ್ಕೆ ಪುಣ್ಯ ಮಾಡಿದ್ದೇವೆ’ ಎಂದರು.
ವಕೀಲ ಎ.ರಾಜೇಶ್, ನಟ ರಥಸಪ್ತಮಿ ಅರವಿಂದ್, ನಟಿ ಪದ್ಮನಿ, ‘ಮಿಸೆಸ್ ಯೂನಿರ್ವಸ್’ ಎಂ.ಸುಧಾ, ಪೌರ ಕಾರ್ಮಿಕ ಮುಖಂಡರಾದ ತ್ಯಾಗರಾಜ, ಆದಿ ಜಾಂಬವ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ನಾರಾಯಣಸ್ವಾಮಿ ಮತ್ತು ಬಿಬಿಎಂಪಿ ಕಾರ್ಯನಿರ್ವಹಿಸುತ್ತಿರುವ 18 ಅಧಿಕಾರಿ/ನೌಕರರಿಗೆ ‘ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸಚಿವಾಲಯ ನೌಕರರ ಸಂಘ ಅಧ್ಯಕ್ಷ ರಮೇಶ್ ಸಂಘ ಮತ್ತು ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷೆ ಡಾ. ಎಸ್.ಜಿ.ಸುಶೀಲಮ್ಮ, ಬಿಬಿಎಂಪಿ ಕಂದಾಯ ವಿಭಾಗ ಜಂಟಿ ಆಯುಕ್ತೆ ಲಕ್ಷ್ಮಿದೇವಿ, ಬಿಬಿಎಂಪಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.