ADVERTISEMENT

ಇಐಎಂಎ ಅಗ್ರಿಮ್ಯಾಕ್ ಇಂಡಿಯಾ–2024: ಕೃಷಿ ಯಂತ್ರೋಪಕರಣ ಪ್ರದರ್ಶನಕ್ಕೆ ಚಾಲನೆ

ಜಿಕೆವಿಕೆ: ಇಐಎಂಎ ಅಗ್ರಿಮ್ಯಾಕ್ ಇಂಡಿಯಾ–2024ರಲ್ಲಿ 100ಕ್ಕೂ ಹೆಚ್ಚು ಮಳಿಗೆಗಳು

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 15:43 IST
Last Updated 29 ಫೆಬ್ರುವರಿ 2024, 15:43 IST
ಪ್ರದರ್ಶನಕ್ಕೆ ಗುರುವಾರ ಭೇಟಿ ನೀಡಿದ್ದ ರೈತರು, ಔಷಧ ಸಿಂಪರಣೆ ಡ್ರೋನ್ ವೀಕ್ಷಿಸಿದರು – ಪ್ರಜಾವಾಣಿ ಚಿತ್ರ
ಪ್ರದರ್ಶನಕ್ಕೆ ಗುರುವಾರ ಭೇಟಿ ನೀಡಿದ್ದ ರೈತರು, ಔಷಧ ಸಿಂಪರಣೆ ಡ್ರೋನ್ ವೀಕ್ಷಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಂಡಿರುವ ‘ಇಐಎಂಎ ಅಗ್ರಿಮ್ಯಾಕ್ ಇಂಡಿಯಾ–2024’ ಕೃಷಿ ಯಂತ್ರೋಪಕರಣ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಲಾಯಿತು. ಮಾರ್ಚ್‌ 3ರವರೆಗೂ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

ಪ್ರದರ್ಶನದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳಿದ್ದು, ಕೃಷಿ ಕ್ಷೇತ್ರದಲ್ಲಿಯ ಹೊಸ ಆವಿಷ್ಕಾರ ಹಾಗೂ ಹೊಸ ಯಂತ್ರೋಪಕರಣಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಬಿತ್ತನೆ ಹಾಗೂ ಕಟಾವಿಗೆ ಸಂಬಂಧಪಟ್ಟ ಯಂತ್ರಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದ್ದು, ಖರೀದಿಗೂ ಅವಕಾಶ ಕಲ್ಪಿಸಲಾಗಿದೆ.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಎಫ್‌ಐಸಿಸಿಐ), ಫೆಡೆರುನಾಕೊಮಾ ಜಂಟಿಯಾಗಿ ಪ್ರದರ್ಶನವನ್ನು ಆಯೋಜಿಸಿದ್ದು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಸಹಭಾಗಿತ್ವವಿದೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ನೆರೆ ರಾಜ್ಯಗಳ ರೈತರು ಪ್ರದರ್ಶನಕ್ಕೆ ಗುರುವಾರ ಭೇಟಿ ನೀಡಿದರು.

ADVERTISEMENT

ವಿದ್ಯುತ್‌ ಚಾಲಿತ ಟ್ರ್ಯಾಕ್ಟರ್‌, ಮೇವು ಕತ್ತರಿಸುವ ಯಂತ್ರಗಳು, ರೋಟಾವೇಟರ್, ಕಲ್ಟಿವೇಟರ್, ಔಷಧ ಸಿಂಪರಣೆಯ ಡ್ರೋನ್‌ಗಳು, ಪಂಪ್‌ಸೆಟ್‌ಗಳು, ಬೃಹತ್ ಗಾತ್ರದ ಭತ್ತ ಕಟಾವು ಯಂತ್ರಗಳು, ಕೃಷಿ ಕೆಲಸಕ್ಕೆ ಬೇಕಾಗುವ ಸಾಮಗ್ರಿಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ.

ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಿ ಕಂಪನಿಗಳು ಪ್ರದರ್ಶನದಲ್ಲಿ ಮಳಿಗೆ ತೆರದಿವೆ. ಕೃಷಿ ಕ್ಷೇತ್ರದಲ್ಲಿರುವ ಹೊಸ ಉದ್ಯೋಗಾವಕಾಶಗಳ ಬಗ್ಗೆ ಮಳಿಗೆಯಲ್ಲಿ ಮಾಹಿತಿ ನೀಡಲಾಗುತ್ತಿದೆ. ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ಗಳಿಸುವ ಬಗ್ಗೆ ತಜ್ಞರು ಮಾಹಿತಿ ವಿನಿಮಯ ಮಾಡಿಕೊಂಡರು.

ಕೃಷಿ ಕ್ಷೇತ್ರದ ಸಮಸ್ಯೆಗಳು ಹಾಗೂ ರೈತರ ಕಷ್ಟಗಳ ನಿವಾರಣೆಗೆ ಸಂಬಂಧಪಟ್ಟಂತೆ ತಜ್ಞರ ಗೋಷ್ಠಿಗಳು ನಡೆದವು. ಅಂತರರಾಷ್ಟ್ರೀಯ ಕೃಷಿ ತಜ್ಞರು ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು. ಇಟಲಿ, ಟರ್ಕಿ, ಥಾಯ್ಲೆಂಡ್‌, ಸ್ಪೇನ್, ಜಪಾನ್ ಹಾಗೂ ಇತರೆ ದೇಶಗಳ ಪ್ರತಿನಿಧಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

ಉಚಿತ ತರಬೇತಿ: ಕೇಂದ್ರ ಸರ್ಕಾರದ ದಕ್ಷಿಣ ವಲಯ ಕೃಷಿ ಯಂತ್ರೋಪಕರಣ ತರಬೇತಿ ಹಾಗೂ ಪರೀಕ್ಷಾ ಸಂಸ್ಥೆಯಿಂದ ಮಳಿಗೆ ತೆರೆಯಲಾಗಿತ್ತು.

‘ಕೃಷಿ ಯಂತ್ರೋಪಕರಣಗಳ ದುರಸ್ತಿ ಹಾಗೂ ನಿರ್ವಹಣೆ ಬಗ್ಗೆ ರೈತರು ಮತ್ತು ಅವರ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಮಾಹಿತಿಗೆ www.srfmtti.nic.in ಸಂಪರ್ಕಿಸಬಹುದು’ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.