ADVERTISEMENT

ಈಜಿಪುರ ಮೇಲ್ಸೇತುವೆ ಮಾರ್ಚ್‌ಗೆ ಪೂರ್ಣ: ಮಹೇಶ್ವರ್‌ ರಾವ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 14:46 IST
Last Updated 18 ಜುಲೈ 2025, 14:46 IST
ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ಮಹೇಶ್ವರ್‌ ರಾವ್‌ ಅವರು ಶುಕ್ರವಾರ ಪರಿಶೀಲಿಸಿದರು
ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ಮಹೇಶ್ವರ್‌ ರಾವ್‌ ಅವರು ಶುಕ್ರವಾರ ಪರಿಶೀಲಿಸಿದರು   

ಬೆಂಗಳೂರು: ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು 2026ರ ಮಾರ್ಚ್‌ ವೇಳೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದರು.

ಮೇಲ್ಸೇತುವೆಗೆ ಕಾಸ್ಟಿಕ್‌ ಮಾಡುವ ಕಾರ್ಯವನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿದ ಅವರು, ‘ಈಜಿಪುರ ಮುಖ್ಯರಸ್ತೆಯಲ್ಲಿ 2.38 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಒಟ್ಟು 762 ಸೆಗ್ಮೆಂಟ್‌ ಕಾಸ್ಟಿಂಗ್‌ಗಳನ್ನು ಅಳವಡಿಸಬೇಕಿದ್ದು, 437 ಸೆಗ್ಮೆಂಟ್‌ ಕಾಸ್ಟಿಂಗ್‌ ಅಳವಡಿಸಲಾಗಿದೆ. ಪ್ರತಿ ತಿಂಗಳು 45 ಸೆಗ್ಮೆಂಟ್‌ ಕಾಸ್ಟಿಂಗ್‌ ಅಳವಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಸೆಗ್ಮೆಂಟ್‌ ಕಾಸ್ಟಿಂಗ್‌ ಅಳವಡಿಕೆ ಕಾಮಗಾರಿಗೆ ಇನ್ನಷ್ಟು ವೇಗ ನೀಡಿ, ಈ ವರ್ಷಾಂತ್ಯಕ್ಕೆ ಪೂರ್ಣಗೊಳಿಸಬೇಕು. ಇನ್ನುಳಿದ ಕಾಮಗಾರಿಯನ್ನು 2026ರ ಮಾರ್ಚ್‌ ಒಳಗಾಗಿ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ADVERTISEMENT

ಸೇಂಟ್‌ ಜಾನ್ಸ್‌ ಆಸ್ಪತ್ರೆ ಬಳಿ ಎರಡು ಕಡೆ ಭೂಸ್ವಾಧೀನವಾಗಬೇಕಿದ್ದು, ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗಿದೆ. ರ‍್ಯಾಂಪ್‌ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದರು.

ಈಜಿಪುರ ಮೇಲ್ಸೇತುವೆ ಕಾಮಗಾರಿಯಲ್ಲಿ ಸೆಗ್ಮೆಂಟ್‌ ಅನ್ನು ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಮಾತ್ರ ಅಳವಡಿಸಲಾಗುತ್ತಿದೆ. ಉಳಿದ ಕಾಮಗಾರಿಯನ್ನು ಸಂಚಾರ ದಟ್ಟಣೆಯ ನಡುವೆಯೂ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮೇಲ್ಸೇತುವೆ ಕಾಮಗಾರಿ ಮುಗಿದಿರುವ ಕೆಳಭಾಗದ ರಸ್ತೆಯಲ್ಲಿ ಡಾಂಬರೀಕರಣ ಮಾಡಲಾಗಿದೆ. ಶೋಲ್ಡರ್‌ ಡ್ರೈನ್‌ ಮತ್ತು ಮೀಡಿಯನ್‌ ಕಾಮಗಾರಿ ನಡೆಯುತ್ತಿದೆ ಎಂದು ಯೋಜನೆಯ ಮುಖ್ಯ ಎಂಜಿನಿಯರ್‌ ರಾಘವೇಂದ್ರ ಪ್ರಸಾದ್‌ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.