ADVERTISEMENT

ವಿದ್ಯುತ್‌ ದರ ಏರಿಕೆ ಕುರಿತ ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 4:07 IST
Last Updated 5 ಏಪ್ರಿಲ್ 2022, 4:07 IST
ಎಂ.ಆರ್.ಸುಕೃತ
ಎಂ.ಆರ್.ಸುಕೃತ   

ಅಂಗಡಿ ಬಾಗಿಲು ಮುಚ್ಚಿ ಮನೆಯಲ್ಲಿ ಕೂರಬೇಕೇ?

ಬೆಲೆ ಏರಿಕೆಯ ಮೂಲಕ ಜನರ ಬದುಕಿನ ಮೇಲೆ ಬರೆ ಎಳೆದಿದ್ದ ಸರ್ಕಾರ ಈಗ ವಿದ್ಯುತ್‌ ‘ಶಾಕ್‌’ ನೀಡಿದೆ. ಜೀವನೋದ್ದೇಶಕ್ಕಾಗಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದೇನೆ. ಬೇಸಿಗೆ ಕಾಲವಾಗಿರುವುದರಿಂದ ಐಸ್‌ಕ್ರೀಂ ಕೂಡ ಮಾರಾಟ ಮಾಡುತ್ತಿದ್ದೇನೆ. ಭದ್ರತಾ ‌ದೃಷ್ಟಿಯಿಂದ ಅಂಗಡಿ ಸುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೇನೆ.ಇದಕ್ಕೆ ದಿನದ 24 ಗಂಟೆಯೂ ವಿದ್ಯುತ್‌ ಬೇಕು. ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೀಗೆ ಏಕಾಏಕಿ ದರ ಏರಿಕೆ ಮಾಡಿದರೆ ಅಂಗಡಿ ಬಾಗಿಲು ಮುಚ್ಚಿ ಮನೆಯಲ್ಲಿ ಕೂರಬೇಕಷ್ಟೆ.

ಎಂ.ಆರ್.ಸುಕೃತ

ADVERTISEMENT

ಸಂಸ್ಥಿತಿ ಆರ್ಗ್ಯಾನಿಕ್ ಮತ್ತು ನ್ಯಾಚುರಲ್ಸ್‌.

**

ಎಲೆಕ್ಟ್ರಿಕಲ್‌ ವಾಹನ ಬಳಸಲು ಸಾಧ್ಯವೇ?

ಪೆಟ್ರೋಲ್‌, ಡೀಸೆಲ್‌ ದರ ಗಗನಮುಖಿಯಾಗಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕಲ್‌ ವಾಹನಗಳ ಬಳಕೆ ಸೂಕ್ತ ಎಂದು ಸರ್ಕಾರ ಹೇಳುತ್ತಿದೆ. ಮತ್ತೊಂದೆಡೆ ವಿದ್ಯುತ್‌ ದರ ಏರಿಕೆ ಮಾಡಲಾಗುತ್ತಿದೆ. ಹೀಗಾದರೆ ಜೀವನ ನಡೆಸುವುದಾದರೂ ಹೇಗೆ? ಹಿಂದೆಲ್ಲಾ ಮೇಣದ ಬತ್ತಿ ಹಾಗೂ ಸೀಮೆಎಣ್ಣೆ ಚಿಮಣಿಯ ಬೆಳಕಿನಲ್ಲಿ ಓದುತ್ತಿದ್ದೆವು. ಆ ಪರಿಸ್ಥಿತಿ ಮತ್ತೆ ಬಂದರೂ ಅಚ್ಚರಿಪಡಬೇಕಿಲ್ಲ.

–ನಾಗಭೂಷಣ್‌, ಜಿಮ್‌ ಮಾಲೀಕ.

**

‘ವರ್ಕ್‌ ಫ್ರಂ ಹೋಂ’ ಕಷ್ಟ

ಕೋವಿಡ್‌ ಕಾರಣ ಮನೆಯಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಲ್ಯಾಪ್‌ಟಾಪ್‌, ಮೊಬೈಲ್‌, ವೈಫೈ ಹೀಗೆ ಪ್ರತಿಯೊಂದಕ್ಕೂ ವಿದ್ಯುತ್‌ ಬೇಕು. ಬೇಸಿಗೆಯಾಗಿರುವುದರಿಂದ ಫ್ಯಾನ್‌ ಹಾಗೂ ಹವಾನಿಯಂತ್ರಿತ ವ್ಯವಸ್ಥೆ (ಎ.ಸಿ) ಇಲ್ಲದೆ ಕೊಠಡಿಯಲ್ಲಿ ಕೂರಲು ಆಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ವಿದ್ಯುತ್‌ ದರ ಏರಿಕೆ ಮಾಡುವುದು ಎಷ್ಟು ಸರಿ. ಸರ್ಕಾರ ಹಾಗೂ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ನಾಗರಿಕರ ನೋವಿನ ಅರಿವಿಲ್ಲವೆ.

ಅರ್ಚನಾ, ಐಟಿ ಕಂಪನಿ ಉದ್ಯೋಗಿ.

**

‘ಜನರ ಸುಲಿಗೆ ಸರಿಯಲ್ಲ’

ಹೊಸದಾಗಿ ಅಳವಡಿಸಿರುವ ಮೀಟರ್‌ಗಳು ವೇಗವಾಗಿ ಓಡುತ್ತವೆ. ಹೀಗಾಗಿ ವಿದ್ಯುತ್‌ ಹೆಚ್ಚು ಬಳಸದಿದ್ದರೂ ದುಬಾರಿ ಶುಲ್ಕ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ. ಇದರ ಜೊತೆಗೆ ಬೆಸ್ಕಾಂ, ಎಂ.ಸಿ.ಶುಲ್ಕ, ಮೀಟರ್‌ ಶುಲ್ಕವೆಂದು ಪ್ರತ್ಯೇಕವಾಗಿ ಜನರನ್ನು ಸುಲಿಗೆ ಮಾಡುತ್ತಿದೆ. ನೀರಿನ ಶುಲ್ಕ, ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದ ಜನ ರೋಸಿ ಹೋಗಿದ್ದಾರೆ. ವಿದ್ಯುತ್‌ ಶುಲ್ಕ ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯಲಾಗಿದೆ.

ಸಿದ್ಧಾರ್ಥ್‌, ರಂಗಭೂಮಿ ಕಲಾವಿದ.

**

ಮಧ್ಯಮ ವರ್ಗದವರಿಗೆ ಹೊರೆ

ಪ್ರತಿ ಯೂನಿಟ್‌ಗೆ 35 ಪೈಸೆ ಹೆಚ್ಚಳ ಮಾಡಿರುವುದರಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಹೆಚ್ಚು ಹೊರೆಯಾಗಲಿದೆ. ಅವರ ಬದುಕು ಮತ್ತಷ್ಟು ದುಸ್ಥರವಾಗಲಿದೆ. ಜನ ಪ್ರತಿಯೊಂದಕ್ಕೂ ವಿದ್ಯುತ್‌ ಮೇಲೆ ಅವಲಂಬಿತರಾಗಿದ್ದಾರೆ. ಹೀಗಿರುವಾಗ ದರ ಕಡಿತಗೊಳಿಸುವುದನ್ನು ಬಿಟ್ಟು ಹೆಚ್ಚಳ ಮಾಡಿರುವುದು ಎಷ್ಟು ಸರಿ?

ರೇಖಾ ಎಸ್‌.ಮಹೇಂದ್ರಕರ್‌, ಅಯ್ಯಪ್ಪನಗರ ನಿವಾಸಿ.

***

‘ಕತ್ತಲೆಯಲ್ಲೇ ಕಾಲ ಕಳೆಯಬೇಕಷ್ಟೇ’

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕುಗ್ಗಿಹೋಗಿರುವ ಜನ ಈಗ ಮನೆಯಲ್ಲಿ ದೀಪ ಹೊತ್ತಿಸಲೂ ಭಯ ಬೀಳಬೇಕಾದ ಪರಿಸ್ಥಿತಿ ಎದುರಾಗಿದೆ. ವಿದ್ಯುತ್‌ ದರ ಏರಿಕೆಯ ಮೂಲಕ ಜನರ ಜೀವನದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಬೇಸಿಗೆಯಲ್ಲಿ ಫ್ಯಾನ್‌ ಇಲ್ಲದೆ ಮಲಗಲು ಸಾಧ್ಯವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಇದರ ಅರಿವಿದೆಯೇ?

ಎಸ್‌.ದರ್ಶನ್‌, ಕತ್ರಿಗುಪ್ಪೆ ನಿವಾಸಿ.

**

‘ಜೀವನ ನಡೆಸುವುದೇ ಕಷ್ಟ’

ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌ ಬೆಲೆ ದಿನೇ ದಿನೇ ಏರುತ್ತಿದೆ. ಈಗ ವಿದ್ಯುತ್‌ ದರವನ್ನೂ ಹೆಚ್ಚಳ ಮಾಡಲಾಗಿದೆ. ದುಡಿದಿದ್ದೆಲ್ಲಾ ಇವುಗಳಿಗೆ ಸರಿಹೋಗುತ್ತಿದೆ. ಉಳ್ಳವರು ಹೇಗೋ ಜೀವನ ನಡೆಸುತ್ತಾರೆ. ಆದರೆ ಬಡವರು, ಮಧ್ಯಮ ವರ್ಗದ ಜನ ಉಪವಾಸ ಮಲಗಬೇಕಷ್ಟೆ. ಸರ್ಕಾರಕ್ಕೆ ಇದರ ಅರಿವಿಲ್ಲವೇ?

ವಿಶಾಲಾಕ್ಷಿ, ಗೃಹಿಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.