ADVERTISEMENT

ಮುಖ್ಯಮಂತ್ರಿ ಭಾವಚಿತ್ರವಿದ್ದ 1,100 ಬ್ಯಾಗ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 19:52 IST
Last Updated 2 ಏಪ್ರಿಲ್ 2019, 19:52 IST

ಬೆಂಗಳೂರು: ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಭಾವಚಿತ್ರಗಳಿದ್ದ 1,100 ಲ್ಯಾಪ್‌ಟಾಪ್‌ ಬ್ಯಾಗ್‌ಗಳನ್ನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಮಾರ್ಚ್‌ 29ರಂದು ರಾತ್ರಿ 10.45ರ ಸುಮಾರಿಗೆ ಕಲಾಸಿಪಾಳ್ಯ ಸಮೀಪದ ಎಸ್‌.ಜಿ.ಎನ್ ಲೇಔಟ್‌ ಮೂಲಕ ಮೊಹಮ್ಮದ್ ಅಲಿ ಹಾಗೂ ಅಬ್ದುಲ್ ಗಫಾರ್ ಎಂಬುವರು ಬ್ಯಾಗ್‌ಗಳನ್ನು ಸಾಗಣೆ ಮಾಡುತ್ತಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿದ್ದ ಅಧಿಕಾರಿಗಳು, ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಬ್ಯಾಗ್‌ಗಳು ಪತ್ತೆಯಾಗಿವೆ. ಆ ಸಂಬಂಧ ಕಲಾಸಿಪಾಳ್ಯ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘ವಾಹನಗಳಲ್ಲಿ ಕೇವಲ 200 ಬ್ಯಾಗ್‌ಗಳು ಇದ್ದವು. ಮೊಹಮ್ಮದ್ ಅಲಿ ಹಾಗೂ ಅಬ್ದುಲ್ ಗಫಾರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ, ‘ಲೆನೋ ಬ್ಯಾಗ್ಸ್‌’ ಕಂಪನಿಯ ಕಚೇರಿಯಲ್ಲಿ ಮತ್ತಷ್ಟು ಬ್ಯಾಗ್ ಇರುವ ಮಾಹಿತಿ ತಿಳಿಯಿತು. ಅಲ್ಲಿಗೆ ಹೋಗಿ ತಪಾಸಣೆ ನಡೆಸಿದಾಗ 900 ಬ್ಯಾಗ್‌ಗಳು ಸಿಕ್ಕವು’ ಎಂದು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು, ಕಲಾಸಿಪಾಳ್ಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಲೋಕಸಭಾ ಚುನಾವಣೆ ಪ್ರಯುಕ್ತ ಬೆಂಗಳೂರಿನಲ್ಲಿ ಈ ಬ್ಯಾಗ್‌ಗಳನ್ನು ಸಿದ್ಧಪಡಿಸಲಾಗಿತ್ತು. ಆರೋಪಿಗಳು, ಬ್ಯಾಗ್‌ಗಳನ್ನು ಯಾರಿಗೆ ಕೊಡಲು ತೆಗೆದುಕೊಂಡು ಹೊರಟಿದ್ದರು ಎಂಬುದು ಗೊತ್ತಾಗಿಲ್ಲ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.