ADVERTISEMENT

ಹೈಟೆನ್ಶನ್ ವೈರ್ ಮುಟ್ಟಿ ಸುಟ್ಟು ಕರಕಲಾದ!

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:02 IST
Last Updated 25 ಏಪ್ರಿಲ್ 2019, 20:02 IST
ತಂತಿ ಮುಟ್ಟಿ ಸುಟ್ಟು ಹೋದ ಯುವಕ
ತಂತಿ ಮುಟ್ಟಿ ಸುಟ್ಟು ಹೋದ ಯುವಕ   

ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈಲಿನ ಬೋಗಿಯನ್ನೇರಿದ ಯುವಕನೊಬ್ಬ, ಹೈಟೆನ್ಶನ್ ವೈರ್ ಮುಟ್ಟಿ ಸುಟ್ಟು ಭಸ್ಮವಾಗಿದ್ದಾನೆ.

ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಏ.22ರಂದು ಈ ಘಟನೆ ಸಂಭವಿಸಿದ್ದು, ಪ್ರಯಾಣಿಕರೊಬ್ಬರು ಆ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದಾರೆ. ಆ ಭೀಕರ ದೃಶ್ಯ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಧ್ಯಾಹ್ನ 12.30ರ ಸುಮಾರಿಗೆ ನಿಲ್ದಾಣಕ್ಕೆ ಬರುವ ಯುವಕ, ‘ನಾನು ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುತ್ತ ಏಕಾಏಕಿ ಬೋಗಿ ಹತ್ತುತ್ತಾನೆ. ಈ ವೇಳೆ ಕೆಲವರು ಆತನ ಮನವೊಲಿಸಲು ಯತ್ನಿಸಿದ್ದಾರೆ. ಈ ಹಂತದಲ್ಲಿ ಆತ ಕೈ ಮೇಲೆತ್ತಿದ್ದಾಗ, ಹೈಟೆನ್ಶನ್ ವೈರ್‌ಗೆ ತಾಕಿ ವಿದ್ಯುತ್ ಪ್ರವಹಿಸಿದೆ. ತಕ್ಷಣ ಬೆಂಕಿ ಹೊತ್ತಿಕೊಂಡು ಇಡೀ ದೇಹ ಸುಟ್ಟು ಕರಕಲಾಗಿದೆ.

ADVERTISEMENT

‘ಆ ವ್ಯಕ್ತಿಯ ಹೆಸರು–ವಿಳಾಸ ಗೊತ್ತಾಗಿಲ್ಲ. ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ವಿಡಿಯೊವನ್ನು ನೆರೆ ರಾಜ್ಯಗಳ ಪೊಲೀಸರಿಗೂ ರವಾನಿಸಲಾಗಿದ್ದು, ಗುರುತು ಪತ್ತೆಗೆ ನೆರವು ಕೋರಿದ್ದೇವೆ’ ಎಂದು ನಗರ ರೈಲ್ವೆ ಪೊಲೀಸರು ತಿಳಿಸಿದರು.

ಇದೇ ಮಾರ್ಚ್ 30ರಂದು ಕಂಟೋನ್ಮೆಂಟ್ ನಿಲ್ದಾಣದಲ್ಲೂ ಯುವಕನೊಬ್ಬ ಬೋಗಿ ಹತ್ತಿ ಹೈಟೆನ್ಶನ್ ವೈರ್ ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.