ADVERTISEMENT

ವಿದ್ಯುತ್‌ ತಗುಲಿ ಎಲೆಕ್ಟ್ರಿಷಿಯನ್ ಸಾವು

ಅಂತರ್ಜಾಲ ತಂತಿಯಲ್ಲಿ ವಿದ್ಯುತ್‌ ಹರಿದಿರುವ ಶಂಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 12:23 IST
Last Updated 10 ಡಿಸೆಂಬರ್ 2019, 12:23 IST

ಬೆಂಗಳೂರು: ಗಿರಿನಗರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಎಲೆಕ್ಟ್ರಿಷಿಯನ್ ಜಿ.ಎಸ್. ಆನಂದ್ (38) ಎಂಬುವರು ಮೃತಪಟ್ಟಿದ್ದಾರೆ.

‘ನಾಗರಬಾವಿ 2ನೇ ಹಂತದ ಪಾಪರೆಡ್ಡಿಪಾಳ್ಯ ನಿವಾಸಿ ಆನಂದ್, ಪತ್ನಿ ರಂಗಮ್ಮ ಹಾಗೂ ಮಗು ಜೊತೆ ನೆಲೆಸಿದ್ದರು. ಬನಶಂಕರಿ 3ನೇ ಹಂತದ ಹೊಸಕೆರೆಹಳ್ಳಿ ಕ್ರಾಸ್ ಬಳಿಯ ರಾಮಚಂದ್ರ ಆಚಾರ್ಯ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲೇ ಈ ಅವಘಢ ಸಂಭವಿಸಿದೆ’ ಎಂದು ಗಿರಿನಗರ ಪೊಲೀಸರು ಹೇಳಿದರು.

‘ಹೊಸಕೆರೆಹಳ್ಳಿಯ ಗೋವಿಂದ್‌ ಎಂಬುವರ ಬಳಿ ಆನಂದ್‌ ಕೆಲಸ ಮಾಡುತ್ತಿದ್ದರು. ಇದೇ 7ರಂದು ಬೆಳಿಗ್ಗೆ ಕೆಲಸವಿರುವುದಾಗಿ ಪತ್ನಿಗೆ ಹೇಳಿ ಮನೆಯಿಂದ ಬಂದಿದ್ದರು. ರಂಗಮ್ಮ ಅವರಿಗೆ ರಾತ್ರಿ ಕರೆ ಮಾಡಿದ್ದ ಗೋವಿಂದ್, ‘ನಿಮ್ಮ ಪತಿಗೆ ಹುಷಾರಿಲ್ಲ. ಬೇಗ ಬನ್ನಿ’ ಎಂದಿದ್ದರು.’

ADVERTISEMENT

‘ರಂಗಮ್ಮ ಹಾಗೂ ಅವರ ಅಕ್ಕನ ಮಗ ಮಂಜು,ರಾಮಚಂದ್ರ ಆಚಾರ್ಯ ಅವರ ಮನೆಗೆ ಹೋಗಿದ್ದರು. ಮನೆಯಲ್ಲೇ ಆನಂದ್ ಅವರ ಮೃತದೇಹ ಕಂಡಿದ್ದರು’ ಎಂದು ಪೊಲೀಸರು ತಿಳಿಸಿದರು.

ಅಂತರ್ಜಾಲದ ತಂತಿಯಲ್ಲಿ ವಿದ್ಯುತ್‌: ‘ವಿದ್ಯುತ್ ತಂತಿಗೆ ತಾಗುವ ರೀತಿಯಲ್ಲೇ ರಾಮಚಂದ್ರ ಅವರ ಮನೆಗೆ ಅಂತರ್ಜಾಲದ ತಂತಿ ಎಳೆಯಲಾಗಿದೆ. ಅದೇ ತಂತಿಯಲ್ಲೇ ವಿದ್ಯುತ್ ಹರಿದಿದ್ದು, ಅದು ತಾಗಿ ಪತಿ ಆನಂದ್ ಮೃತಪಟ್ಟಿರುವುದಾಗಿ ರಂಗಮ್ಮ ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಆ್ಯಕ್ಟ್ ಇಂಟರ್‌ನೆಟ್ ಕೇಬಲ್ ಕಂಪನಿ, ಗೋವಿಂದ್, ಮನೆ ಮಾಲೀಕ ರಾಮಚಂದ್ರ ಆಚಾರ್ಯ ಹಾಗೂ ಬೆಸ್ಕಾಂ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.’

‘ಅಂತರ್ಜಾಲದ ತಂತಿಯಲ್ಲಿ ವಿದ್ಯುತ್ ಹರಿಯುವುದಿಲ್ಲವೆಂದು ಕಂಪನಿಯವರು ಹೇಳುತ್ತಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಂತರ್ಜಾಲ ತಂತಿಯನ್ನೂ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ನಿಜಾಂಶ ಗೊತ್ತಾಗಲಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.