ADVERTISEMENT

ಎಲೆ ಮಲ್ಲಪ್ಪ ಶೆಟ್ಟಿ ಕೆರೆಗೆ ಮಣ್ಣು: ಸ್ಥಳೀಯರ ಕಳವಳ

ಹೊಸಕೋಟೆ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಕೆರೆಯಲ್ಲಿ ಪಂಪ್‌ಹೌಸ್‌ ನಿರ್ಮಾಣ

ಪ್ರವೀಣ ಕುಮಾರ್ ಪಿ.ವಿ.
Published 29 ಜನವರಿ 2021, 19:35 IST
Last Updated 29 ಜನವರಿ 2021, 19:35 IST
ಎಲೆ ಮಲ್ಲಪ್ಪ ಶೆಟ್ಟಿ ಕೆರೆಗೆ ಮಣ್ಣು ತುಂಬಿರುವುದು
ಎಲೆ ಮಲ್ಲಪ್ಪ ಶೆಟ್ಟಿ ಕೆರೆಗೆ ಮಣ್ಣು ತುಂಬಿರುವುದು   

ಬೆಂಗಳೂರು: ಕೆ.ಆರ್‌.ಪುರದ ಮೇಡಹಳ್ಳಿ ಸಮೀಪದ ಎಲೆ ಮಲ್ಲಪ್ಪ ಶೆಟ್ಟಿ ಕೆರೆಗೆ ರಾಜಕಾಲುವೆ ಸೇರುವ ಬಳಿ ಮಣ್ಣು ತುಂಬಿಸಲಾಗುತ್ತಿದ್ದು, ಇದಕ್ಕೆ ಸ್ಥಳೀಯರು ಹಾಗೂ ಕೆರೆ ಸಂರಕ್ಷಣಾ ಹೋರಾಟದಲ್ಲಿ ತೊಡಗಿರುವ ಸಾಮಾಜಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

‘ನಾಲ್ಕೈದು ದಿನಗಳಿಂದ ಜೆಸಿಬಿಯಲ್ಲಿ ಮಣ್ಣು ತಂದು ಕೆರೆಗೆ ತುಂಬಿಸುತ್ತಿದ್ದಾರೆ. ಈಗಾಗಲೇ ಕೆರೆ ಸಾಕಷ್ಟು ಒತ್ತುವರಿಯಾಗಿದೆ. ಮತ್ತೆ ಮಣ್ಣು ತುಂಬುವುದರಿಂದ ಕೆರೆಯ ಗಾತ್ರ ಕಿರಿದಾಗುತ್ತಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ‘ಪ್ರಜಾವಾಣಿ’ ಜೊತೆ ಆತಂಕ ತೋಡಿಕೊಂಡರು.

ಈ ಕೆರೆಯು ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿದೆ. ಈ ಬಗ್ಗೆ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಒಬ್ಬರಲ್ಲಿ ವಿಚಾರಿಸಿ ದಾಗ, ‘ಈ ಕೆರೆಗೆ ಮಣ್ಣು ತುಂಬಿಸಿ ರುವುದು ಖಾಸಗಿಯವರಲ್ಲ. ಇಲಾಖೆ ಯಿಂದಲೇ ಮಣ್ಣು ತುಂಬಿಸಲಾಗುತ್ತಿದೆ. ಹೊಸಕೋಟೆ ತಾಲ್ಲೂಕಿನ 30 ಕೆರೆಗಳಿಗೆ ಎರಡನೇ ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ತುಂಬಿಸುವ ₹ 100 ಕೋಟಿ ವೆಚ್ಚದ ಯೋಜನೆ ಅಂಗವಾಗಿ ಈ ಕಾಮಗಾರಿ ನಡೆಯುತ್ತಿದೆ. ಈ ಕೆರೆಯಿಂದ ನಿತ್ಯ 400 ಲಕ್ಷ ಲೀಟರ್‌ಗಳಷ್ಟು ಶುದ್ಧೀಕರಿಸಿದ ನೀರನ್ನು ಬೇರೆ ಕೆರೆಗಳಿಗೆ ಹಾಯಿಸುವ ಯೋಜನೆ ಇದು’ ಎಂದು ವಿವರಿಸಿದರು.

ADVERTISEMENT

‘ಕೆರೆಯಲ್ಲಿ ಎಸ್‌ಟಿಪಿ ಜಾಕ್‌ವೆಲ್‌ ಹಾಗೂ ಪಂಪ್‌ಹೌಸ್‌ ನಿರ್ಮಿಸಲು ರಿಂಗ್‌ ಬಂಡ್‌ ನಿರ್ಮಿಸಿ, ನೀರು ಬತ್ತಿಸಿ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕಿದೆ. ಆರಂಭದಲ್ಲಿ ಕೆರೆಯ 40 x40 ಮೀಟರ್‌ ಜಾಗಕ್ಕೆ ಮಣ್ಣು ತುಂಬಿ ಸಮತಟ್ಟು ಮಾಡುತ್ತೇವೆ. ಅಲ್ಲಿ 25x25 ಮೀಟರ್‌ ಜಾಗದಲ್ಲಿ ಪಂಪ್‌ಹೌಸ್‌ ಮತ್ತು ಜಾಕ್‌ವೆಲ್‌ ನಿರ್ಮಾಣವಾಗ ಲಿದೆ. ಕಾಮಗಾರಿ ಮುಗಿದ ಬಳಿಕ ಉಳಿದ ಮಣ್ಣನ್ನು ತೆರವುಗೊಳಿಸುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಕೆರೆಗೆ ಮಣ್ಣು ತುಂಬಿಸಿ ಅದರ ವಿಸ್ತೀರ್ಣವನ್ನು ಕುಗ್ಗಿಸುವುದಕ್ಕೆ ನಿಯಮ ಗಳಲ್ಲಿ ಅವಕಾಶ ಇಲ್ಲ. ನ್ಯಾ.ಎನ್‌.ಕೆ. ಪಾಟೀಲ ವರದಿ ಪ್ರಕಾರ ಕೆರೆಯಲ್ಲಿ ನೀರು ನಿಲ್ಲುವ ಜಾಗ ಮಾತ್ರವಲ್ಲ, ಅದರ ಮೀಸಲು ಪ್ರದೇಶವನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕು. ಕೆರೆಯ ಜಾಗವನ್ನು ಯಾವುದೇ ಕಾಮಗಾರಿಗೆ ಬಳಸಬಾರದು ಎಂದು ನ್ಯಾಯಾಲಯದ ಆದೇಶವೂ ಇದೆ. ಆದರೂ ಈ ಕೆರೆಯ ರಕ್ಷಣೆಯ ಹೊಣೆ ಹೊತ್ತ ಇಲಾಖೆಯವರೇ ಅದಕ್ಕೆ ಮಣ್ಣೂ ತುಂಬುತ್ತಿರುವುದು ವಿಪ ರ್ಯಾಸ’ ಎನ್ನುತ್ತಾರೆ ‘ನೀರಿನ ಹಕ್ಕಿಗಾಗಿ ಜನಾಂದೋಲನ ಕರ್ನಾಟಕ’ ದ ರಾಜ್ಯ ಸಂಚಾಲಕ ಈಶ್ವರಪ್ಪ ಮಡಿವಾಳಿ.

ಕಾಮಗಾರಿಯ ಮಾಹಿತಿ ಫಲಕವೆಲ್ಲಿ: ‘ಏನೇ ಕಾಮಗಾರಿ ನಡೆಸುವುದಿದ್ದರೂ ಅಲ್ಲಿ ಅದರ ವಿವರವನ್ನು ಸ್ಥಳದಲ್ಲಿ ಪ್ರಕಟಿಸಬೇಕು. ಕೆರೆಯ ಪರಿಸರದಲ್ಲಿ ಅಂತಹ ಯಾವುದೇ ಮಾಹಿತಿ ಫಲಕಗಳನ್ನು ಅಳವಡಿಸಿಲ್ಲ. ಕೆರೆ ಪಕ್ಕ ಖಾಲಿ ಜಾಗಗಳು ಬಹಳಷ್ಟಿವೆ. ಅವೆಲ್ಲವನ್ನು ಬಿಟ್ಟು ಕೆರೆಯ ನೀರು ನಿಲ್ಲುವ ಜಾಗವನ್ನು ಪಂಪ್‌ಹೌಸ್‌ ಮತ್ತು ಜಾಕ್‌ವೆಲ್‌ ನಿರ್ಮಿಸಲು ಬಳಸಿ ಕೊಳ್ಳುವುದು ಏಕೆಂದು ಅರ್ಥ ವಾಗುತ್ತಿಲ್ಲ. ಈಗ ಮಣ್ಣು ತುಂಬುತ್ತಿರುವ ಜಾಗದಲ್ಲಿ ಹಿಂದೆ ಅನೇಕ ಪಕ್ಷಿಗಳು ಕುಳಿತುಕೊಳ್ಳುತ್ತಿದ್ದವು. ಇಲಾಖೆ ಏನೇ ಕಾಮಗಾರಿ ನಡೆಸುವುದಿ
ದ್ದರೂ ಅದರ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿ, ಪಾರದರ್ಶಕವಾಗಿ ನಡೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಹೆಬ್ಬಾಳ ಕಣಿವೆಯ ನೀರು ಈ ಕೆರೆಯನ್ನು ಸೇರುತ್ತದೆ. ಈ ಕೆರೆ ಜೀವವೈವಿಧ್ಯದ ದೃಷ್ಟಿಯಿಂದಲೂ ಮಹತ್ತರವಾದುದು. ಒಂದು ಕಾಲದಲ್ಲಿ ಪಕ್ಷಿಧಾಮವಾಗಿ ಗುರುತಿಸಿಕೊಂಡ ಕೆರೆ ಇದು. ರಾಷ್ಟ್ರೀಯ ಹೆದ್ದಾರಿಯು ಈ ಕೆರೆಯ ಮೂಲಕ ಹಾದು ಹೋಗಿದೆ. ಇದರ ಜೀವವೈವಿಧ್ಯ ಕ್ಷೀಣಿಸಿದೆ. ಕೊಳಚೆ ನೀರು ಸೇರಿಕೊಂಡ ಪರಿಣಾಮ 10 ವರ್ಷಗಳಿಂದ ಈಚೆಗೆ ಈ ಜಲಮೂಲ ಅವಸಾನದ ಅಂಚನ್ನು ತಲುಪಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ನನ್ನ ಕಣ್ಣ ಮುಂದೆಯೇ ಸಾಯುತ್ತಿದೆ ಕೆರೆ’

‘ಎಲೆ ಮಲ್ಲಪ್ಪ ಶೆಟ್ಟಿ ಕೆರೆಗೆ ದೊಡ್ಡ ಇತಿಹಾಸ ಇದೆ. ಬರಗಾಲದಿಂದಾಗಿ ಜನರೆಲ್ಲ ಬಸವಳಿದಿದ್ದಾಗ ಅವರಿಗೆ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ವ್ಯಾಪಾರಿ ಎಲೆ ಮಲ್ಲಪ್ಪ ಶೆಟ್ಟಿ ಅವರು ನಿರ್ಮಿಸಿದ ಬಹುದೊಡ್ಡ ಕೆರೆ ಇದು. 432 ಎಕರೆ ವಿಸ್ತೀರ್ಣದ ಈ ಕೆರೆ ಅನೇಕ ಕಡೆ ಒತ್ತುವರಿಯಾಗಿದೆ. ಕೆರೆಯ ಜಾಗ ಈಗ ಎಷ್ಟು ಉಳಿದಿದೆಯೋ ತಿಳಿಯದು. ಈ ಕೆರೆಗೆ ಕಸವನ್ನು ತಂದು ಸುರಿಯುತ್ತಾರೆ. ಈ ಕೆರೆಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಲೇ ಇದ್ದೇವೆ’ ಎಂದು ಸ್ಥಳೀಯ ನಿವಾಸಿ ಬಾಲಾಜಿ ರಘೋತ್ತಮ್‌ ಬಾಲಿ ತಿಳಿಸಿದರು.

‘ನಾವೂ ಈ ಕೆರೆಯ ನೀರು ಕುಡಿದು ಬೆಳೆದವರು. ನಾನು ಈಜು ಕಲಿತದ್ದು ಇದೇ ಕೆರೆಯಲ್ಲಿ. ಸಾವಿರಾರು ವಲಸೆ ಹಕ್ಕಿಗಳಿಗೆ ನೆಲೆ ಒದಗಿಸಿದ್ದ ಕೆರೆಯ ತುಂಬಾ ಪಕ್ಷಿಗಳ ಕಲರವ ಕೇಳಿಸುತ್ತಿತ್ತು. ಈಗ ಇದರಲ್ಲಿ ಕಲುಷಿತ ನೀರು ಮಾತ್ರ ತುಂಬಿದೆ. ಈ ಕೆರೆ ನನ್ನ ಕಣ್ಣಮುಂದೆಯೇ ಸಾಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.