ADVERTISEMENT

ಕಾಡುಬೀಸನಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಎಂಬೆಸಿಯಿಂದ ₹ 100 ಕೋಟಿ: ಒಪ್ಪಂದ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 20:11 IST
Last Updated 3 ಮಾರ್ಚ್ 2025, 20:11 IST
‘ನಮ್ಮ ಮೆಟ್ರೊ’ ನೀಲಿ ಮಾರ್ಗದಲ್ಲಿ ಕಾಡುಬೀಸನಹಳ್ಳಿ ನಿಲ್ದಾಣಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಮತ್ತು ಎಂಬೆಸಿ ಆರ್‌ಇಐಟಿಯ ಸಿಇಒ ರುತ್ವಿಕ್ ಭಟ್ಟಾಚಾರ್‌ ಒಡಂಬಡಿಕೆ ಮಾಡಿಕೊಂಡರು
‘ನಮ್ಮ ಮೆಟ್ರೊ’ ನೀಲಿ ಮಾರ್ಗದಲ್ಲಿ ಕಾಡುಬೀಸನಹಳ್ಳಿ ನಿಲ್ದಾಣಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಮತ್ತು ಎಂಬೆಸಿ ಆರ್‌ಇಐಟಿಯ ಸಿಇಒ ರುತ್ವಿಕ್ ಭಟ್ಟಾಚಾರ್‌ ಒಡಂಬಡಿಕೆ ಮಾಡಿಕೊಂಡರು   

‘ನಮ್ಮ ಮೆಟ್ರೊ’ ನೀಲಿ ಮಾರ್ಗದಲ್ಲಿ ಕಾಡುಬೀಸನಹಳ್ಳಿ ನಿಲ್ದಾಣಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್‌ ಮತ್ತು ಎಂಬೆಸಿ ಆರ್‌ಇಐಟಿ ನಡುವೆ ಒಡಂಬಡಿಕೆ ನಡೆದಿದೆ. ಅದರಂತೆ ನಿಲ್ದಾಣವು ‘ಎಂಬೆಸಿ ಟೆಕ್ ವಿಲೇಜ್ ಕಾಡುಬೀಸನಹಳ್ಳಿ ಮೆಟ್ರೊ ನಿಲ್ದಾಣ’ ಎಂದು ನಾಮಕರಣಗೊಳ್ಳಲಿದೆ.

ಎಂಬೆಸಿ ಆರ್‌ಇಐಟಿಯ ಭಾಗವಾಗಿರುವ ವಿಕಾಸ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ (ವಿಟಿಪಿಎಲ್), ಕಾಡುಬೀಸನಹಳ್ಳಿಯಲ್ಲಿ ಹೊಸ ಮೆಟ್ರೊ ನಿಲ್ದಾಣದ ನಿರ್ಮಾಣಕ್ಕೆ ಒಪಂದದಂತೆ ₹ 100 ಕೋಟಿ ನೀಡಲಿದೆ. ಮೆಟ್ರೊ ನಿಗಮವು 30 ವರ್ಷಗಳ ಅವಧಿಗೆ ಜಾಹೀರಾತು, ವಾಣಿಜ್ಯ ಸ್ಥಳ ಮತ್ತು ನೇರ ಸಂಪರ್ಕದ ಜೊತೆಗೆ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣದ ನಾಮಕರಣದ ಹಕ್ಕುಗಳನ್ನು ನೀಡಲಿದೆ. 

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಮಾತನಾಡಿ, ‘ಒಆರ್‌ಆರ್ ಕಾರಿಡಾರ್ ಚಲನಶೀಲ ಮಾರ್ಗವಾಗಿದೆ. ಪ್ರಮುಖ ವಾಣಿಜ್ಯ ಕೇಂದ್ರಗಳು, ಕಚೇರಿ ಉದ್ಯಾನಗಳು ಮತ್ತು ವಸತಿ ಪ್ರದೇಶಗಳನ್ನು ಇದು ಸಂಪರ್ಕಿಸುತ್ತದೆ. ಈ ಸಹಭಾಗಿತ್ವವು ಮೂಲಸೌಕರ್ಯ ಬೆಳವಣಿಗೆಯನ್ನು ವೇಗಗೊಳಿಸಲು ಸಹಕಾರಿಯಾಗಿದೆ’ ಎಂದು ಶ್ಲಾಘಿಸಿದರು.

ADVERTISEMENT

ಎಂಬೆಸಿ ಆರ್‌ಇಐಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುತ್ವಿಕ್ ಭಟ್ಟಾಚಾರ್‌ ಮಾತನಾಡಿ, ‘ಸಾರ್ವಜನಿಕ ಚಲನಶೀಲತೆ ಪ್ರೋತ್ಸಾಹಿಸಲು, ದೀರ್ಘಾವಧಿಯ ಹೂಡಿಕೆಗಳ ಮೂಲಕ ನಗರದ ಮೂಲಸೌಕರ್ಯ ಹೆಚ್ಚಿಸಲು ಬದ್ಧರಾಗಿದ್ದೇವೆ. ಈ ಮೆಟ್ರೊ ಯೋಜನೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆಯ ಹೆಚ್ಚಿನ ಬಳಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ’ ಎಂದು ತಿಳಿಸಿದರು.

ಕೆಟ್ಟು ನಿಂತ ಮೆಟ್ರೊ: ಸಂಚಾರ ವ್ಯತ್ಯಯ

ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿ ಅತ್ತಿಗುಪ್ಪೆ ನಿಲ್ದಾಣದಲ್ಲಿ ಮೆಟ್ರೊ ರೈಲು ಕೆಟ್ಟು ನಿಂತಿದ್ದರಿಂದ ರೈಲು ಸಂಚಾರಕ್ಕೆ 10 ನಿಮಿಷ ತೊಡಕುಂಟಾಯಿತು. ಮೆಜೆಸ್ಟಿಕ್‌ ಕಡೆಯಿಂದ ಚಲ್ಲಘಟ್ಟ ಕಡೆಗೆ ಹೋಗುತ್ತಿದ್ದ ರೈಲು ಮಧ್ಯಾಹ್ನ ಸುಮಾರು 12 ಗಂಟೆಯ ಹೊತ್ತಿಗೆ ಅತ್ತಿಗುಪ್ಪೆಯಲ್ಲಿ ಸ್ತಬ್ಧಗೊಂಡಿತು. ಬಿಎಂಆರ್‌ಸಿಎಲ್‌ ಎಂಜಿನಿಯರ್‌ಗಳು ಬಂದು ಪರಿಶೀಲಿಸಿದಾಗ ವಿದ್ಯುತ್‌ ಪೂರೈಕೆ ಸಂಪರ್ಕ ತಪ್ಪಿ ಹೋಗಿತ್ತು. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಇತರ ರೈಲುಗಳಿಗೂ ತೊಡಕಾಯಿತು. ಸಮಸ್ಯೆ ಸರಿಪಡಿಸಿ 10 ನಿಮಿಷಗಳ ನಂತರ ಸಂಚಾರ ಪುನರಾರಂಭಗೊಳಿಸಲಾಯಿತು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.