ADVERTISEMENT

ಎಂಬೆಸ್ಸಿ ಆರ್‌ಇಐಟಿಯಿಂದ ₹4.5 ಕೋಟಿ ವೆಚ್ಚದ ಶಾಲೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 19:38 IST
Last Updated 17 ಮಾರ್ಚ್ 2021, 19:38 IST
ಎಂಬೆಸ್ಸಿ ಆರ್‌ಇಐಟಿ ಮತ್ತು ಎಎನ್‌ಝಡ್‌ ಕಂಪನಿ ವತಿಯಿಂದ ನಿರ್ಮಿಸಿ ಸರ್ಕಾರಿ ಶಾಲೆಗೆ ಹಸ್ತಾಂತರಿಸಲಾಗಿರುವ ಶಾಲಾ ಕಟ್ಟಡದ ಹೊರನೋಟ
ಎಂಬೆಸ್ಸಿ ಆರ್‌ಇಐಟಿ ಮತ್ತು ಎಎನ್‌ಝಡ್‌ ಕಂಪನಿ ವತಿಯಿಂದ ನಿರ್ಮಿಸಿ ಸರ್ಕಾರಿ ಶಾಲೆಗೆ ಹಸ್ತಾಂತರಿಸಲಾಗಿರುವ ಶಾಲಾ ಕಟ್ಟಡದ ಹೊರನೋಟ   

ಯಲಹಂಕ: ನಗರದ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿರುವ ಎಂಬೆಸ್ಸಿ ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ (ಆರ್‌ಇಐಟಿ) ವತಿಯಿಂದ ₹4.5 ಕೋಟಿ ವೆಚ್ಚದಲ್ಲಿ ಹೆಗಡೆ ನಗರದಲ್ಲಿ ದೊಡ್ಡ ಶಾಲೆಯನ್ನು ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆಗೆ ಬುಧವಾರ ಹಸ್ತಾಂತರಿಸಲಾಯಿತು.

ಎಎನ್‌ಝಡ್‌ ಸ್ಮಾರ್ಟ್‌ ಸೆಂಟರ್‌ ಕಂಪನಿಯ ಸಹಯೋಗದಲ್ಲಿ ಎಂಬೆಸ್ಸಿ ಸಮೂಹ ಈ ಶಾಲೆಯನ್ನು ನಿರ್ಮಿಸಿದೆ. 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಉಪಯೋಗ ಪಡೆಯಲಿದ್ದಾರೆ.

ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ‘ಎಂಬೆಸ್ಸಿ ಸಮೂಹ ಮತ್ತು ಎಎನ್‌ಝಡ್‌ನಂತಹ ಕಾರ್ಪೊರೇಟ್ ಕಂಪನಿಗಳು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಇಂತಹ ಅತ್ಯುತ್ತಮ ಕಟ್ಟಡ ನಿರ್ಮಿಸಿರುವುದು ಅತ್ಯಂತ ಸ್ವಾಗತಾರ್ಹ. ಶಾಲಾ ಕಟ್ಟಡದಲ್ಲಿನ ಅತ್ಯಾಧುನಿಕ ಸೌಲಭ್ಯ ಮತ್ತು ವಾತಾವರಣವು ಮಕ್ಕಳ ಏಳಿಗೆಗೆ ಪೂರಕವಾಗುವುದಲ್ಲದೆ, ಶಿಕ್ಷಣದ ಗುಣಮಟ್ಟ ಹೆಚ್ಚಲು ಸಹಕಾರಿಯಾಗಲಿವೆ’ ಎಂದರು.

ADVERTISEMENT

15 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ತಲೆ ಎತ್ತಿರುವ ಈ ಶಾಲೆಯಲ್ಲಿ 19 ಕೊಠಡಿಗಳಿವೆ. ಸಿಬ್ಬಂದಿ ಕೊಠಡಿ, ಗ್ರಂಥಾಲಯ, ಕಂಪ್ಯೂಟರ್‌ ಲ್ಯಾಬ್‌, ವಿವಿಧೋದ್ದೇಶದ ಸಭಾಂಗಣ, ಶೌಚಾಲಯ, ಶುದ್ಧ ಕುಡಿಯುವ ನೀರು, ಮಳೆ ನೀರು ಸಂಗ್ರಹ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲ ಮತ್ತು ಅತ್ಯಾಧುನಿಕ ಸೌಲಭ್ಯಗಳು ಈ ಕೊಠಡಿಯಲ್ಲಿವೆ.

ಶಾಸಕ ಕೃಷ್ಣ ಬೈರೇಗೌಡ, ಎಂಬೆಸ್ಸಿ ಸಮೂಹದ ನಿರ್ದೇಶಕ ಜಿತು ವಿರ್ವಾನಿ, ಎಎನ್‌ಝಡ್‌ ಬೆಂಗಳೂರು ಸರ್ವಿಸ್‌ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ. ವೆಂಕಟರಾಮನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.