ಬೆಂಗಳೂರು: ಇನ್ಫೊಸಿಸ್ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರು ಶೌಚಾಲಯಕ್ಕೆ ತೆರಳಿದ್ದ ವೇಳೆ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿಯ ಸ್ವಪ್ನಿಲ್ ನಾಗೇಶ್ ಮಾಲಿ ಬಂಧಿತ ಆರೋಪಿ.
ಇನ್ಪೊಸಿಸ್ ಕಂಪನಿಯಲ್ಲಿ ಟೆಕ್ನಿಕಲ್ ಟೆಸ್ಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
‘ದೂರುದಾರೆ ಮಹಿಳೆಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಇತ್ತು. ತಿಂಗಳಲ್ಲಿ ಹತ್ತು ದಿನ ಕಚೇರಿಗೆ ಬಂದು ಕೆಲಸ ಮಾಡುವಂತೆ ಕಂಪನಿಯ ಸೂಚನೆ ಇತ್ತು. ಜೂನ್ 30ರಂದು ಮಹಿಳೆ ಇನ್ಫೊಸಿಸ್ ಕಂಪನಿಗೆ ತೆರಳಿದ್ದರು. ಅಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಮೂರನೇ ಮಹಡಿಯಲ್ಲಿರುವ ಶೌಚಾಲಯಕ್ಕೆ ತೆರಳಿದ್ದರು. ಆಗ ಎದುರುಗಡೆ ಇರುವ ಶೌಚಾಲಯದ ಬಾಗಿಲು ಬಳಿ ಬೆಳಕು ಕಾಣಿಸಿತ್ತು. ಸ್ವಲ್ಪ ಮುಂದಕ್ಕೆ ತೆರಳಿ ಪರಿಶೀಲಿಸಿದಾಗ ಪಕ್ಕದ ಕಮೋಡ್ ಮೇಲೆ ಆರೋಪಿ ನಿಂತುಕೊಂಡು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸುತ್ತಿರುವುದು ಕಂಡುಬಂದಿತ್ತು. ಕಂಪನಿಯ ಇತರೆ ಉದ್ಯೋಗಿಗಳಿಗೆ ಈ ವಿಷಯ ತಿಳಿಸಿದಾಗ ಅವರು, ಆರೋಪಿಯನ್ನು ಹಿಡಿದುಕೊಂಡು ಮೊಬೈಲ್ ಕಸಿದುಕೊಂಡರು. ಆಗ ಆರೋಪಿ ಕ್ಷಮಿಸಿ, ಇನ್ಮುಂದೆ ಈ ರೀತಿಯ ಕೃತ್ಯ ಎಸಗುವುದಿಲ್ಲ ಎಂದು ಕೇಳಿಕೊಂಡಿದ್ದ. ಆ ವೇಳೆಗೆ ಕಂಪನಿಯ ಎಚ್‌ಆರ್ ಸಹ ಸ್ಥಳಕ್ಕೆ ಬಂದು ಮೊಬೈಲ್ ಪರಿಶೀಲಿಸಿದಾಗ ದೂರುದಾರೆ ಶೌಚಾಲಯದಲ್ಲಿದ್ದ ವಿಡಿಯೊ ಇತ್ತು. ಅದರ ಸ್ಕ್ರೀನ್‌ಶಾಟ್ ತೆಗೆದುಕೊಂಡು ವಿಡಿಯೊವನ್ನು ಎಚ್ಆರ್ ಡಿಲಿಟ್ ಮಾಡಿದ್ದರು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಘಟನೆ ನಡೆದ ಬಳಿಕ ಮಹಿಳೆ ಮನೆಗೆ ತೆರಳಿ ಪತಿಗೆ ವಿಷಯ ತಿಳಿಸಿದ್ದರು. ಪ್ರಕರಣವನ್ನು ಮುಕ್ತಾಯಗೊಳಿಸಿದರೆ ಆರೋಪಿ, ಬೇರೆ ಮಹಿಳೆಯರ ವಿಡಿಯೊ ತೆಗೆದು ಲೈಂಗಿಕ ಕಿರುಕುಳ ನೀಡುವ ಸಾಧ್ಯತೆ ಇರುತ್ತದೆ. ಆ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಠಾಣೆಯಲ್ಲಿ ದೂರು ದಾಖಲಿಸುವಂತೆ ಪತ್ನಿಗೆ ತಿಳಿಸಿದ್ದರು. ಅದಾದ ಮೇಲೆ ದೂರು ನೀಡಲಾಗಿತ್ತು’ ಎಂಬ ಅಂಶ ಎಫ್ಐಆರ್‌ನಲ್ಲಿದೆ.
‘ಆರೋಪಿಯು ಹೀಲಿಕ್ಸ್ ಡಿಪಾರ್ಟ್‌ಮೆಂಟ್‌ನಲ್ಲಿ ಸೀನಿಯರ್ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಆರೋಪಿ ಮೊಬೈಲ್ ಜಪ್ತಿ ಮಾಡಿಕೊಂಡು ಪರಿಶೀಲಿಸಿದಾಗ ದೂರುದಾರೆ ಹಾಗೂ ಮತ್ತೊಬ್ಬ ಯುವತಿಯ ಎರಡು ವಿಡಿಯೊಗಳು ಪತ್ತೆಯಾಗಿವೆ. ಗುರುವಾರ ಬೆಳಿಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.
ಎಫ್‌ಎಸ್‌ಎಲ್‌ಗೆ ರವಾನೆ:
ಆರೋಪಿಯಿಂದ ಜಪ್ತಿ ಮಾಡಿಕೊಂಡಿರುವ ಮೊಬೈಲ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗುವುದು. ತಜ್ಞರು ಮೊಬೈಲ್ ಪರಿಶೀಲಿಸಿ, ಆರೋಪಿ ಎಷ್ಟು ದಿನದಿಂದ ಈ ರೀತಿ ಕೃತ್ಯ ಎಸಗುತ್ತಿದ್ದ, ಎಷ್ಟು ವಿಡಿಯೊಗಳನ್ನು ಚಿತ್ರೀಕರಿಸಿದ್ದ ಎಂಬುದರ ಬಗ್ಗೆ ವರದಿ ನೀಡಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಆರೋಪಿ ಸ್ವಪ್ನಿಲ್ ನಾಗೇಶ್ ಮಾಲಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಸಂತ್ರಸ್ತೆಯ ಕಾನೂನು ಹೋರಾಟಕ್ಕೆ ಕಂಪನಿ ಬೆಂಬಲ ನೀಡಲಿದೆ. ಪೊಲೀಸರ ತನಿಖೆಗೂ ಸಹಕಾರ ನೀಡಲಾಗುವುದು’ ಎಂದು ಇನ್ಫೊಸಿಸ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.