ADVERTISEMENT

ಒಂದು ಹೋರಾಟದ ಪರಿಣಾಮವಾಗಿ ಕನ್ನಡಿಗರಿಗೆ 2,172 ಉದ್ಯೋಗ ದೊರೆತವು!

ಕನ್ನಡಿಗರಿಗೇ ಉದ್ಯೋಗ ಅಭಿಯಾನ–30 ವರ್ಷದಿಂದ ನಡೆದಿದೆ ಹೋರಾಟ

​ಪ್ರಜಾವಾಣಿ ವಾರ್ತೆ
Published 7 ಮೇ 2019, 19:04 IST
Last Updated 7 ಮೇ 2019, 19:04 IST
ವಿನುತಾ ಮೂಲಾ
ವಿನುತಾ ಮೂಲಾ   

ಬೆಂಗಳೂರು: ‘ಕನ್ನಡಿಗರಿಗೇ ಉದ್ಯೋಗ’ ಅಭಿಯಾನ ಇಂದು ಮುಂಚೂಣಿಗೆ ಬರುತ್ತಿರುವಂತೆಯೇ, ಇದೇ ಉದ್ದೇಶದೊಂದಿಗೆ ನಗರದಲ್ಲಿ ಹಲವು ವರ್ಷಗಳಿಂದ ಹೋರಾಡುತ್ತಿರುವ ‘ಕನ್ನಡಿಗರ ಉದ್ಯೋಗ ವೇದಿಕೆ’ಯ ಯಶೋಗಾಥೆಯೊಂದೂ ಗಮನ ಸೆಳೆದಿದೆ.

ಬ್ಯಾಂಕಿಂಗ್‌ ಉದ್ಯೋಗವನ್ನು ಕರ್ನಾಟಕದ ಹೊರತಾಗಿ ಇತರ ರಾಜ್ಯಗಳ ಅಭ್ಯರ್ಥಿಗಳಿಗೇ ನೀಡುತ್ತಿರುವುದರ ವಿರುದ್ಧ ಈ ವೇದಿಕೆ 2013ರಲ್ಲಿ ತೀವ್ರ ಪ್ರತಿಭಟನೆ ನಡೆಸಿತ್ತು. ಅದರ ಪರಿಣಾಮವಾಗಿ ಆ ವರ್ಷ ಒಟ್ಟು 2,623 ಬ್ಯಾಂಕ್‌ ಉದ್ಯೋಗಗಳ ಪೈಕಿ 2,172 ಮಂದಿ ಕನ್ನಡಿಗರಿಗೆ ಉದ್ಯೋಗ ದೊರೆತಿತ್ತು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ ವೇದಿಕೆಯ ಸಂಸ್ಥಾಪಕಿ ವಿನುತಾ ಮೂಲಾ.

‘ಡಾ.ಸರೋಜಿನಿ ಮಹಿಷಿ ವರದಿ ಆಧಾರದಲ್ಲೇ ಕನ್ನಡಿಗರ ಹಿತ ರಕ್ಷಣೆಯ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಯಿತು. ಆದರೆ ಮೂಲ ಉದ್ದೇಶವನ್ನೇ ಪ್ರಾಧಿಕಾರ ಮರೆತುಬಿಟ್ಟಿದೆ. ಎಲ್ಲಾ ಸರ್ಕಾರಿ ನೇಮಕಾತಿಯಲ್ಲಿ ಎ ಗ್ರೇಡ್‌ನ ಶೇ 65ರಷ್ಟು, ಬಿ ಗ್ರೇಡ್‌ನ ಶೇ 80ರಷ್ಟು ಹಾಗೂ ಸಿ–ಡಿ ಗ್ರೇಡ್‌ನ ಶೇ 100ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ನೀಡಬೇಕು ಎಂಬ ಮಹಿಷಿ ವರದಿಯನ್ನು ಸರ್ಕಾರ ಒಪ್ಪಿಕೊಂಡಿದ್ದರೂ ಅದನ್ನು ಪಾಲಿಸುತ್ತಿಲ್ಲ. ನೆರೆಯ ರಾಜ್ಯಗಳಲ್ಲಿ ಭಾಷೆಯ ಮೇಲಿನ ಅಭಿಮಾನದಿಂದ ಇಂತಹ ವರದಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಅಲ್ಲಿನವರಿಗೇ ಉದ್ಯೋಗ ದೊರಕುವಂತೆ ಮಾಡಲಾಗಿದೆ’ ಎಂದು ನೋವಿನಿಂದ ನುಡಿಯುತ್ತಾರೆ.

ADVERTISEMENT

‘ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕನ್ನಡ ಬಾರದವರನ್ನೂ ನೇಮಿಸಲು ಮುಂದಾದಾಗ 2017ರಲ್ಲಿ ವೇದಿಕೆಯ ವತಿಯಿಂದ ಪರೀಕ್ಷೆಯನ್ನೇ ತಡೆಹಿಡಿಯಲಾಗಿತ್ತು. ಆದರೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಒತ್ತಡದ ಕಾರಣಕ್ಕೆ ಮರುದಿನವೇ ಪೊಲೀಸ್‌ ಭದ್ರತೆಯಲ್ಲಿ ಪರೀಕ್ಷೆ ನಡೆಸಲಾಯಿತು. ನಮ್ಮ ಸರ್ಕಾರಕ್ಕೆ ಕನ್ನಡಿಗರ ಬಗ್ಗೆ ಕಾಳಜಿ ಇಲ್ಲದಿದ್ದರೆ ಆಗುವುದು ಇದೇ. ಕನ್ನಡಿಗರಿಗೆ ಉದ್ಯೋಗ ಎಂಬ ಅಭಿಯಾನ ಮುಂದುವರಿಯಬೇಕು, ಇಂತಹ ಅಭಿಯಾನದಿಂದಲಾದರೂ ಕನ್ನಡಿಗರಿಗೆ ನ್ಯಾಯ ಸಿಗುವಂತಾಗಬೇಕು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.