ADVERTISEMENT

ಉದ್ಯೋಗ ಆಧಾರಿತ ಪ್ರೋತ್ಸಾಹ ಧನ ಯೋಜನೆ ಇಎಲ್‌ಐ ಆಗಸ್ಟ್‌ನಿಂದ ಜಾರಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 16:31 IST
Last Updated 21 ಜುಲೈ 2025, 16:31 IST
   

ಬೆಂಗಳೂರು: ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉದ್ಯೋಗ ಆಧಾರಿತ ಪ್ರೋತ್ಸಾಹ ಧನ (ಇಎಲ್‌ಐ) ಯೋಜನೆ ಆಗಸ್ಟ್‌ನಿಂದ ಜಾರಿಗೆ ಬರಲಿದೆ’ ಎಂದು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ಬಾಲಕೃಷ್ಣ ನಾಯಕ ತಿಳಿಸಿದರು.

‘ಯಾವುದೇ ಕಂಪನಿ ಅಥವಾ ಸಂಸ್ಥೆಯಲ್ಲಿ ಮೊದಲ ಬಾರಿ ಉದ್ಯೋಗಕ್ಕೆ ಸೇರುವ ಉದ್ಯೋಗಿಗೆ ಈ ಯೋಜನೆ ಅನ್ವಯವಾಗಲಿದೆ’ ಎಂದು ಆರ್‌.ಆರ್‌.ನಗರದ ವಲಯ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

‘ಈ ಯೋಜನೆಯಡಿ ಕೇಂದ್ರ ಸರ್ಕಾರ ಎರಡು ಕಂತುಗಳಲ್ಲಿ ಗರಿಷ್ಠ ₹15 ಸಾವಿರ ಪ್ರೋತ್ಸಾಹ ಧನ ನೀಡಲಿದೆ. ಯೋಜನೆ ಮೂಲಕ 3.5 ಕೋಟಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಹೆಚ್ಚುವರಿ ಉದ್ಯೋಗ ಸೃಷ್ಟಿಗಾಗಿ ಉದ್ಯೋಗದಾತರಿಗೂ ಎರಡು ವರ್ಷಗಳವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ’ ಎಂದರು.

ADVERTISEMENT

‘ಯೋಜನೆಯು ಎರಡು ಭಾಗಗಳನ್ನು ಒಳಗೊಂಡಿದೆ. ಮೊದಲ ಭಾಗವಾಗಿ ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‌ಒ)ಯಲ್ಲಿ ನೋಂದಾಯಿತ ಉದ್ಯೋಗಿಗೆ ತಿಂಗಳಿಗೆ ಗರಿಷ್ಠ ₹15 ಸಾವಿರವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ₹1 ಲಕ್ಷದವರೆಗೆ ವೇತನವಿರುವ ಉದ್ಯೋಗಿಗಳು ಇದಕ್ಕೆ ಅರ್ಹರಾಗಿರುತ್ತಾರೆ. ಮೊದಲ ಕಂತನ್ನು 6 ತಿಂಗಳ ಸೇವೆಯ ನಂತರ ಮತ್ತು 2ನೇ ಕಂತನ್ನು ಒಂದು ವರ್ಷದ ಸೇವೆಯ ನಂತರ ನೀಡಲಾಗುತ್ತದೆ’ಎಂದು ವಿವರಿಸಿದರು.

‘ಎರಡನೇ ಭಾಗವಾಗಿ ಕನಿಷ್ಠ ಆರು ತಿಂಗಳವರೆಗೆ ನಿರಂತರ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಸರ್ಕಾರವು ಎರಡು ವರ್ಷಗಳವರೆಗೆ ತಿಂಗಳಿಗೆ ₹3ಸಾವಿರವರೆಗೆ ಪ್ರೋತ್ಸಾಹಧನ ನೀಡಲಿದೆ. ಇಪಿಎಫ್‌ಒದಲ್ಲಿ ನೋಂದಾಯಿಸಲಾದ 50ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಕನಿಷ್ಠ ಇಬ್ಬರು ಹೆಚ್ಚುವರಿ ಉದ್ಯೋಗಿಗಳನ್ನು, 50 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಹೆಚ್ಚುವರಿಯಾಗಿ ಐದು ಮಂದಿ  ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಬಾಲಕೃಷ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮತ್ತೊಬ್ಬ ಪ್ರಾದೇಶಿಕ ಆಯುಕ್ತ ವೆಂಕಟ ಸುಬ್ಬಯ್ಯ ಮತ್ತು ಸಹಾಯಕ ಕಮಿಷನರ್ ಸೂರಜ್ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.