ಶಾಲಿನಿ ರಜನೀಶ್
ಬೆಂಗಳೂರು: ನಗರದ ಪ್ರತಿ ನಾಗರಿಕರು ಸಾರ್ವಜನಿಕ ಸಾರಿಗೆ ಬಳಸಬೇಕಿದ್ದರೂ, ಅದಕ್ಕೆ ಅಗತ್ಯವಿರುವ ಕೊನೆತಾಣದ ಸಂಪರ್ಕ (ಲಾಸ್ಟ್ ಮೈಲ್ ಕನೆಕ್ಟಿವಿಟಿ) ವ್ಯವಸ್ಥೆ ಇಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.
‘ನಮ್ಮ ರಸ್ತೆ–2025’ಯಲ್ಲಿ ‘ಪಾಲಿಕೆಯ ಎಂಜಿನಿಯರ್‌ಗಳ ಸಾಮರ್ಥ್ಯ ವೃದ್ಧಿ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಸಾರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಎಲೆಕ್ಟ್ರಿಕ್ ವಾಹನಗಳು, ಸಹ ಪ್ರಯಾಣ ಸೇರಿದಂತೆ ಇನ್ನಿತರೆ ವಾಹನಗಳನ್ನು ಸಂಪರ್ಕಕೊಂಡಿಯ ವ್ಯವಸ್ಥೆಯನ್ನಾಗಿ ಮಾಡಿದರೆ ಸಮಸ್ಯೆ ಬಗೆಹರಿಸಬಹುದಾಗಿದೆ. ಸರ್ಕಾರದ ಜೊತೆಗೆ ನಾಗರಿಕರು ಕೈಜೋಡಿಸಿದರೆ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ಸಾಧ್ಯ ಎಂದರು.
ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ನಾಗರಿಕರಾದವರು, ಇದು ‘ನಮ್ಮ ಬೆಂಗಳೂರು - ನಮ್ಮ ರಸ್ತೆ, ನಮ್ಮದೇ ಸಮಸ್ಯೆ - ನಮ್ಮದೇ ಪರಿಹಾರ’ ಎಂದು ಯೋಚಿಸಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಆಗ ಸಮಸ್ಯೆಗೆ ಪರಿಹಾರ ಕಂಡುಕೊಂಡು ಉತ್ತಮ ಫಲಿತಾಂಶ ಯಶಶ್ವಿಯಾಗಲು ಸಾಧ್ಯ ಎಂದು ಹೇಳಿದರು.
‘ಬೆಂಗಳೂರಿನ ಹವಾಮಾನದ ಬಗ್ಗೆ ಎಲ್ಲರೂ ಸಂತಸ ವ್ಯಕ್ತಪಡಿಸುತ್ತಾರೆ. ಹಾಗೆಯೇ, ನಗರದ ರಸ್ತೆಗಳ ಬಗ್ಗೆ ಅಷ್ಟೇ ಬೇಸರ ವ್ಯಕ್ತಪಡಿಸುತ್ತಾರೆ. ನಾವು ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸಿದರೆ ಅದಕ್ಕಿಂತ ಹೆಚ್ಚಾಗಿ ಜನಸಂಖ್ಯೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣ ಮೀರಿ ಹೆಚ್ಚುತ್ತಲೇ ಇದೆ. ಅದನ್ನು ನಾವು ಹೇಗೆ ನಿಯಂತ್ರಣ ಮಾಡಬೇಕೆಂಬುದರ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಬೇಕಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.