ADVERTISEMENT

ಹಿಂದಿಯವರಿಗೆ ಇಂಗ್ಲಿಷ್‌ ಪರೀಕ್ಷೆ ಕಡ್ಡಾಯವಲ್ಲ

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ನೇಮಕಾತಿ ಮುಖ್ಯ ಪರೀಕ್ಷೆ: ಪರಿಷ್ಕೃತ ಆದೇಶಕ್ಕೂ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 20:27 IST
Last Updated 16 ಸೆಪ್ಟೆಂಬರ್ 2019, 20:27 IST

ಬೆಂಗಳೂರು: ಬ್ಯಾಂಕಿಂಗ್‌ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್‌) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಆರ್‌ಆರ್‌ಬಿ) ಅಧಿಕಾರಿಗಳ ನೇಮಕಾತಿಯ ಮುಖ್ಯ ಪರೀಕ್ಷೆ ವಿಚಾರದಲ್ಲೂ ವಿವಾದಕ್ಕೆ ಗುರಿಯಾಗಿದೆ.

‘ಹಿಂದಿಯನ್ನು ಹೊರತುಪಡಿಸಿದ ಇತರ 13 ಭಾರತೀಯ ಭಾಷೆಗಳಲ್ಲಿ ಆರ್‌ಆರ್‌ಬಿಯ ಮುಖ್ಯ ಪರೀಕ್ಷೆ ನಡೆಸಲಿದ್ದೇವೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಂಸತ್ತಿನಲ್ಲಿ ಭರವಸೆ ನೀಡಿದ್ದರು. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ (ಶ್ರೇಣಿ–1) ಹುದ್ದೆಯ ನೇಮಕಾತಿ ಮುಖ್ಯ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಐಬಿಪಿಎಸ್‌ ಸೋಮವಾರ ಬಿಡುಗಡೆ ಮಾಡಿದೆ. ಇದರ ಪ್ರಕಾರ ಹಿಂದಿ ಮಾತೃಭಾಷೆಯ ವಿದ್ಯಾರ್ಥಿಗಳು ಎಲ್ಲಾ ಐದು ಪರೀಕ್ಷೆಗಳನ್ನು ತಮ್ಮ ಭಾಷೆಯಲ್ಲೇ ಬರೆಯಬಹುದು. ಆದರೆ, ಹಿಂದಿಯೇತರ ಭಾಷೆಗಳಲ್ಲಿ ಪರೀಕ್ಷೆ ಬರೆಯುವವರು ಇಂಗ್ಲಿಷ್‌ ಭಾಷಾ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಕಡ್ಡಾಯ.

ಮುಖ್ಯ ಪರೀಕ್ಷೆಯಲ್ಲಿ ಐದು ಪ್ರಶ್ನೆಪತ್ರಿಕೆಗಳು ಇರಲಿವೆ. ನಾಲ್ಕನೇ ಪ್ರಶ್ನೆಪತ್ರಿಕೆಯು ಭಾಷೆಗೆ ಸಂಬಂಧಿಸಿದ್ದಾಗಿದೆ. ಅಭ್ಯರ್ಥಿಗಳು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇದ್ದರೂ ಭಾಷಾ ವಿಷಯವನ್ನು ಇಂಗ್ಲಿಷ್‌ ಅಥವಾ ಹಿಂದಿಯಲ್ಲೇ ಬರೆಯುವುದು ಅನಿವಾರ್ಯ. ಉಳಿದ ನಾಲ್ಕು ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆಯಲು 13 ಭಾರತೀಯ ಭಾಷೆಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ADVERTISEMENT

‘ದೇಶದಲ್ಲಿ ಹಿಂದಿಯೇತರ ಭಾಷಿಕರು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯುವುದು ಕಡ್ಡಾಯ ಮಾಡಲಾಗಿದೆ. ಹಿಂದಿ ಭಾಷಿಕರಿಗೆ ಇಂಗ್ಲಿಷ್‌ ಪರೀಕ್ಷೆಯನ್ನು ಕಡ್ಡಾಯ ಮಾಡಿಲ್ಲ ಏಕೆ’ ಎಂದು ಬನವಾಸಿ ಬಳಗದ ಅರುಣ್‌ ಜಾವಗಲ್‌ ಪ್ರಶ್ನಿಸಿದರು.

‘ಈ ಪರೀಕ್ಷೆಗಳಲ್ಲಿ ಅಭ್ಯರ್ಥಿ ಗಳಿಸುವ ಪ್ರತಿಯೊಂದು ಅಂಕವೂ ಅತ್ಯಮೂಲ್ಯ. ಈಗಿನ ಪರೀಕ್ಷಾ ವ್ಯವಸ್ಥೆ ಹಿಂದಿ ಭಾಷಿಕರ ಪಕ್ಷಪಾತಿಯಾಗಿದೆ’ ಎಂದು ಆರೋಪಿಸಿದರು.

ಶ್ರೇಣಿ–1 ಅಧಿಕಾರಿಗಳ ಆನ್‌ಲೈನ್‌ ಪರೀಕ್ಷೆ ಅ.13ರಂದು ನಡೆಯಲಿದೆ. ಶ್ರೇಣಿ–2 ಹಾಗೂ ಶ್ರೇಣಿ–3 ಅಧಿಕಾರಿಗಳರ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಅ. 13ರಂದು ಪ್ರಕಟಿಸುವುದಾಗಿ ಐಬಿಪಿಎಸ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.