ಸಾಂದರ್ಭಿಕ ಚಿತ್ರ
ಬೆಂಗಳೂರು: ಹಣಕಾಸು ವ್ಯವಹಾರದಲ್ಲಿ ಉಂಟಾದ ದ್ವೇಷದಿಂದ ಮಹಿಳೆಯೊಬ್ಬರಿಗೆ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಸಮೀಪ ಚಾಕುವಿನಿಂದ ಇರಿಯಲಾಗಿದ್ದು, ಆರೋಪಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶೇಷಾದ್ರಿಪುರದ ನಿವಾಸಿ ಜೆ.ವಿ.ಜಯರಾಮ್‌ರೆಡ್ಡಿ ಬಂಧಿತ. ಮಲ್ಲೇಶ್ವರದ ವಿಮಲಾ ಅವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡಿರುವ ಮಹಿಳೆ ಈ ಹಿಂದೆ ವಕೀಲರಾಗಿದ್ದು, ಇತ್ತೀಚೆಗೆ ವಕಾಲತ್ತು ನಡೆಸುವುದನ್ನು ನಿಲ್ಲಿಸಿದ್ದರು.
‘ಇರಿತಕ್ಕೊಳಗಾದ ವಿಮಲಾ ಹಾಗೂ ಆರೋಪಿ ಜಯರಾಮರೆಡ್ಡಿ ಅವರು ಒಂಬತ್ತು ವರ್ಷಗಳಿಂದ ಸ್ನೇಹಿತರು. ಪ್ರಕರಣವೊಂದರ ವಿಚಾರವಾಗಿ ವಿಮಲಾ ಅವರು ಶೇಷಾದ್ರಿಪುರ ಠಾಣೆಗೆ ದೂರು ನೀಡಿದ್ದರು. ಆ ಪ್ರಕರಣದ ವಿಚಾರಣೆಯು ಕೋರ್ಟ್‌ನಲ್ಲಿ ನಡೆಯುತ್ತಿತ್ತು. ಮಂಗಳವಾರ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಬರುತ್ತಿದ್ದ ವೇಳೆ ಅಡ್ಡಗಟ್ಟಿದ ಆರೋಪಿ ಚಾಕುವಿನಿಂದ ಇರಿದಿದ್ದಾನೆ. ಕೃತ್ಯ ಎಸಗಲು ಆರೋಪಿ ಚಾಕುವನ್ನು ಜತೆಗೆ ತಂದಿದ್ದ’ ಎಂದು ಪೊಲೀಸರು ಹೇಳಿದರು.
ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮಹಿಳೆ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.