ಬೆಂಗಳೂರು: ಒಳಮೀಸಲಾತಿಗಾಗಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ಹಲವರು ಜಾತಿ ಕಾಲಂನಲ್ಲಿ ಆದಿ–ಕರ್ನಾಟಕ, ಆದಿ–ಆಂಧ್ರ, ಆದಿ–ದ್ರಾವಿಡ ಎಂದು ನಮೂದಿಸುತ್ತಿದ್ದು, ಉಪ ಜಾತಿ ಕಲಂನಲ್ಲಿ ಭೋವಿ ಎಂದು ನಮೂದಿಸುತ್ತಿದ್ದಾರೆ. ಇದರಿಂದ ಭೋವಿ/ವಡ್ಡರ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮು ದೂರಿದ್ದಾರೆ.
ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಭೋವಿ ಕೂಡಾ ಒಂದಾಗಿದೆ. ಆದರೆ, ಭೋವಿಯನ್ನು ಉಪ ಜಾತಿಯಾಗಿ ದಾಖಲು ಮಾಡಬೇಕೆಂದು ಸಮೀಕ್ಷೆದಾರರೇ ಹಲವು ಕಡೆ ಹೇಳುತ್ತಿದ್ದು, ಅಂಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಎಲ್ಲ ದತ್ತಾಂಶ ಪರಿಶೀಲಿಸಿ ಉಪ ಜಾತಿಯ ಕಾಲಂನಲ್ಲಿ ಭೋವಿ ಎಂದು ಇರುವುದನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಧಿಕಾರಿಗಳ ಎಡವಟ್ಟಿನಿಂದ ಬಹಳ ಕಡೆಗಳಲ್ಲಿ ಪಡಿತರ ಚೀಟಿಯಲ್ಲಿ ಪರಿಶಿಷ್ಟ ಜಾತಿಯ ಬದಲು ಪರಿಶಿಷ್ಟ ಪಂಗಡ ಎಂದು ನಮೂದಾಗುತ್ತಿದೆ. ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಇವರು ಸಮೀಕ್ಷೆಯಲ್ಲಿ ಭಾಗವಹಿಸದಂತಾಗಿದೆ. ಪಡಿತರ ಚೀಟಿಯಲ್ಲಿ ಇಂತಹ ಲೋಪ ಇದ್ದಾಗ ಅವರು ಮತದಾರರ ಚೀಟಿ ಅಥವಾ ಆಧಾರ್ ಕಾರ್ಡ್ ಅನ್ನು ಇಲ್ಲವೇ ಜಾತಿ ಪ್ರಮಾಣಪತ್ರವನ್ನು ಪರಿಗಣಿಸಿ ಗಣತಿ ಮಾಡಬೇಕು. ಇಲ್ಲದೇ ಇದ್ದರೆ ಭೋವಿ ಸಮುದಾಯದ ಅನೇಕ ಕುಟುಂಬಗಳಿಗೆ ಅನ್ಯಾಯವಾಗಲಿದೆ. ಸರ್ಕಾರ ಎಲ್ಲ ದೋಷಗಳನ್ನು ಸರಿಪಡಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.