ADVERTISEMENT

ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 19:46 IST
Last Updated 23 ನವೆಂಬರ್ 2020, 19:46 IST

ಬೆಂಗಳೂರು: ‘ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ತಿಗಳ ಕ್ಷತ್ರಿಯ ಸಮುದಾಯದವರ ಏಳಿಗೆಗೆ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪಿಸಲೇಬೇಕು’ ಎಂದು ತಿಗಳ ಕ್ಷತ್ರಿಯ ಸಮುದಾಯದ ಆದಿಶಕ್ತಿ ಮಹಾಸಂಸ್ಥಾನ ಮಠದ ಪ್ರಣವಾನಂದಪುರಿ ಸ್ವಾಮೀಜಿ ಆಗ್ರಹಿಸಿದರು.

ಕರ್ನಾಕ ರಾಜ್ಯ ತಿಗಳ ಕ್ಷತ್ರಿಯ ಯುವ ಬ್ರಿಗೇಡ್ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಚಿಂತನ ಮಂಥನ’ದಲ್ಲಿ ಮಾತನಾಡಿದ ಅವರು, ‘ತಿಗಳ ಸಮುದಾಯ ತೀರಾ ಹಿಂದುಳಿದಿದೆ. ಏಳಿಗೆಗೆ ಸರ್ಕಾರ ಮುಂದಾಗಬೇಕು. ಮಠಕ್ಕೆ ಹೆಚ್ಚಿನ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮೀಶ್ ಮಾತನಾಡಿ, ‘ನಮ್ಮ ಸಮುದಾಯದ ಕಾರ್ಯವೈಖರಿ ಮೆಚ್ಚಿ ಮೈಸೂರು ಒಡೆಯರು ಬೆಂಗಳೂರಿನ ವಿವಿಧೆಡೆ 400 ಎಕರೆ ಜಾಗ ನೀಡಿದ್ದರು. ಅದನ್ನು ಸರ್ಕಾರ ಆಗಾಗ ಸ್ವಾಧೀನಪಡಿಸಿಕೊಂಡಿದೆ. ಈಗ ಪರ್ಯಾಯ ಜಾಗ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಐತಿಹಾಸಿಕ ಮಹತ್ವ ಹೊಂದಿರುವ ಕರಗ ಆಚರಣೆಗೆ ವಿಶೇಷ ಸ್ಥಾನಮಾನ ನೀಡಬೇಕು. ಸರ್ಕಾರದ ಮೇಲೆ ಒತ್ತಡ ಹೇರುವ ಸಂಬಂಧ ಚರ್ಚಿಸಲು ಇದೇ 29ರಂದು ಸಮುದಾಯದ ಮುಖಂಡರ ಸಭೆ ಕರೆಯಲಾಗಿದೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಎಲ್ಲಾ ಜಿಲ್ಲೆಗಳಿಂದ ವಿಧಾನಸೌಧದ ತನಕ ಪಾದಯಾತ್ರೆ ನಡೆಸಲಾಗುವುದು’ ಎಂದರು.

‘ತಿಗಳರನ್ನು ಪ್ರವರ್ಗ 1ಕ್ಕೆ ಸೇರಿಸಿ’
‘ಅತಿ ಹಿಂದುಳಿದ ತಿಗಳ ಜನಾಂಗದವರು ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಸವಿದ್ದಾರೆ. ತಿಗಳ ಜಾತಿ ಮತ್ತು ಅದರಡಿಯಲ್ಲಿ ಬರುವ ಎಲ್ಲ ಉಪಜಾತಿಗಳನ್ನು ಪ್ರವರ್ಗ ‘2ಎ’ದಿಂದ ‘ಪ್ರವರ್ಗ 1’ಕ್ಕೆ ಬದಲಿಸಲು ಕ್ರಮ ಕೈಗೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್‌ ಒತ್ತಾಯಿಸಿದ್ದಾರೆ.

‘ಈ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಅಲ್ಲದೆ, ಈಗಾಗಲೇ ಅಸ್ತಿತ್ವದಲ್ಲಿರುವ ಸವಿತಾ, ಕುಂಬಾರ, ಮಡಿವಾಳ, ವಿಶ್ವಕರ್ಮ ಮತ್ತಿತರ ಹಿಂದುಳಿದ ಜಾತಿಗಳ ನಿಗಮಗಳಿಗೆ ಹೆಚ್ಚು ಅನುದಾನ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.