ADVERTISEMENT

ಪಕ್ಷ ಹೇಳಿದ್ದನ್ನು ಎಲ್ಲರೂ ಕೇಳಬೇಕು: ಸಚಿವ ವಿ. ಸೋಮಣ್ಣ ಹೇಳಿದರು.

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 16:30 IST
Last Updated 21 ಮಾರ್ಚ್ 2023, 16:30 IST
   

ಬೆಂಗಳೂರು: ‘ಯಡಿಯೂರಪ್ಪನವರು ಈ ರಾಜ್ಯ ಹಾಗೂ ನಮ್ಮ ಪಕ್ಷದ ನಾಯಕರು. ವರಿಷ್ಠರಾದ ಅಮಿತ್ ಶಾ ಕರೆದು ನನಗೆ ಕೆಲವು ಜವಾಬ್ದಾರಿ ನೀಡಿದ್ದಾರೆ. ಅದನ್ನು ನಾನು ನಿರ್ವಹಿಸುತ್ತೇನೆ. ಇನ್ನಾವುದೇ ಉಪ್ಪು–ಖಾರ ಯಾರೂ ಹಾಕುವುದು ಬೇಡ’ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಬಿಜೆಪಿ ಬಿಡುವ ಹಾಗೂ ಕಾಂಗ್ರೆಸ್‌ ಸೇರುವ ಪ್ರಶ್ನೆಗೆ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಉತ್ತರ ನೀಡಿದ ಸೋಮಣ್ಣ, ‘ಇನ್ನೊಬ್ಬರನ್ನು ತೃಪ್ತಿಗೊಳಿಸಲು ನನಗೆ ಸಾಧ್ಯವಿಲ್ಲ. ಹೊಟ್ಟೆಪಾಡಿನ ರಾಜಕಾರಣ ನನ್ನದ್ದಲ್ಲ. ಪಕ್ಷ ಹೇಳಿದ್ದನ್ನು ಮಾಡುತ್ತಿದ್ದೇನೆ. ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಎಲ್ಲ ಪಕ್ಷದಲ್ಲೂ ನಾನು ಗೆದ್ದಿದ್ದೇನೆ’ ಎಂದರು.

‘ಯಡಿಯೂರಪ್ಪ ಅವರಿಗೆ 80 ವರ್ಷ ನನಗೆ 72 ವರ್ಷ. ನಾನು ಇನ್ನೊಂದು ಅವಧಿ ಇರಬಹುದು, ಇಲ್ಲದಿರಬಹುದು. ಯಡಿಯೂರಪ್ಪನವರ ಯುಗ, ನನ್ನ ಯುಗ ಎಲ್ಲ ಒಂದೇ ರೀತಿ ಇದೆ. ಪಕ್ಷ ಏನು ಹೇಳುತ್ತದೋ ಅದನ್ನು ಎಲ್ಲರೂ ಮಾಡಬೇಕು. ಎಲ್ಲಿ ಸಿಹಿ ಇರುತ್ತೋ ಅಲ್ಲಿ ಕಹಿ ಇರುತ್ತದೆ. ಯಾರು ಏನು ಬೇಕಾದರೂ ಮಾತನಾಡಬಹುದು. ಪಕ್ಷದ ತೀರ್ಮಾನವೇ ಅಂತಿಮ. ಮೇಲಿರುವ ವರಿಷ್ಠರು ಚಾಮರಾಜನಗರ ಜಿಲ್ಲೆಯಲ್ಲಿ ಕೆಲಸ ಮಾಡಲು ಹೇಳಿದ್ದಾರೆ’ ಎಂದರು.

ADVERTISEMENT

‘ಸಿದ್ದರಾಮಯ್ಯ ದೊಡ್ಡ ನಾಯಕರು. ಹಿಂದೆ ಉಪ–ಚುನಾವಣೆಯಲ್ಲಿ ಅವರ ಜೊತೆ ನಾನೂ ಇದ್ದೆ. ಸಿದ್ದರಾಮಯ್ಯ ಎಲ್ಲೇ ಇದ್ದರೂ ನಾಯಕರು. ಅವರು ಎಲ್ಲಿ ನಿಂತರೂ ಅವರ ಕೆಲಸ ಅವರದ್ದು, ನಮ್ಮ ಕೆಲಸ ನಮ್ಮದು. ನನ್ನ ಕ್ಷೇತ್ರ ಗೋವಿಂದರಾಜನಗರ’ ಎಂದು ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದರು.

‘ಸಿನಿಮಾ ಬಗ್ಗೆ ಮುನಿರತ್ನರನ್ನೇ ಕೇಳಿ’

‘ಮುನಿರತ್ನ ಒಬ್ಬ ಕಲಾಕಾರ. ಅವರನ್ನೇ ಸಿನಿಮಾ ಬಗ್ಗೆ ಕೇಳಿ. ಮುನಿರತ್ನ ಅವರಲ್ಲಿರುವ ಬುದ್ಧಿವಂತಿಕೆ ನನ್ನಲ್ಲಿ ಒಂದು ಪರ್ಸೆಂಟ್‌ ಇದ್ದಿದ್ದರೆ ನಾನು ಎಲ್ಲೋ ಇರುತ್ತಿದ್ದೆ’ ಎಂದು ಸೋಮಣ್ಣ ಹೇಳಿದರು.

ಉರಿಗೌಡ– ನಂಜೇಗೌಡ ಸಿನಿಮಾ ನಿರ್ಮಾಣದ ಬಗ್ಗೆ ಕೇಳಿದ ಪ್ರಶ್ನೆಗೆ, ‘ನನಗೆ ಉರಿನೂ ಗೊತ್ತಿಲ್ಲ. ನಂಜಿನ ಅರಿವೂ ಗೊತ್ತಿಲ್ಲ. ಅಂತಹ ಕ್ಷುಲ್ಲಕ ವಿಚಾರಗಳನ್ನು ಸೃಷ್ಟಿಸಿದವರನ್ನೇ ಸಿನಿಮಾ ಬಗ್ಗೆ ಕೇಳಬೇಕು. ಅದರ ಗಂಧಗಾಳಿಯೇ ನನಗೆ ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.