ADVERTISEMENT

ಮಾಜಿ ಕಾರ್ಪೊರೇಟರ್ ಬಂಧನ: ಜಾಮೀನು ಮಂಜೂರು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 0:00 IST
Last Updated 15 ಫೆಬ್ರುವರಿ 2024, 0:00 IST
ಪದ್ಮರಾಜ್
ಪದ್ಮರಾಜ್   

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ಅವರನ್ನು ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದ ಆರೋಪದಡಿ ಮಾಜಿ ಕಾರ್ಪೊರೇಟರ್ ಎಸ್.ಎಚ್. ಪದ್ಮರಾಜ್ ಅವರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಗೆ ನ್ಯಾಯಾಲಯದಿಂದ ಜಾಮೀನು ಸಹ ಮಂಜೂರಾಗಿದೆ.

‘ಗೋಪಾಲಯ್ಯ ಅವರು ದೂರು ನೀಡಿದ್ದರು. ಬಸವೇಶ್ವರ ನಗರ ವಾರ್ಡ್ ಮಾಜಿ ಕಾರ್ಪೊರೇಟರ್ ಪದ್ಮರಾಜ್‌ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯದಲ್ಲಿ ಅವರಿಗೆ ಬುಧವಾರ ಜಾಮೀನು ಮಂಜೂರಾಗಿದೆ’ ಎಂದು ಪೊಲೀಸರು ಹೇಳಿದರು.

ಏನಿದು ಪ್ರಕರಣ: ‘ರಾತ್ರಿ 11 ಗಂಟೆ ಸುಮಾರಿಗೆ ಕರೆ ಮಾಡಿದ್ದ ಪದ್ಮರಾಜ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನನ್ನ ಕುಟುಂಬವನ್ನು ಮುಗಿಸುವುದಾಗಿ ಜೀವ ಬೆದರಿಕೆ ಹಾಕಿದ್ದ’ ಎಂದು ಗೋಪಾಲಯ್ಯ ಅವರು ದೂರಿನಲ್ಲಿ ತಿಳಿಸಿದ್ದರು.

ADVERTISEMENT

‘ಗುತ್ತಿಗೆ ಕೆಲಸ ಪಡೆಯಲು ₹ 15 ಲಕ್ಷ ಕೊಟ್ಟಿದ್ದೆ’

‘ಕೆಲಸವೊಂದರ ಗುತ್ತಿಗೆ ಪಡೆಯುವ ವಿಚಾರಕ್ಕಾಗಿ ಗೋಪಾಲಯ್ಯಗೆ ₹ 15 ಲಕ್ಷ ಕೊಟ್ಟಿದ್ದೆ. ಆತ ನನಗೆ ಗುತ್ತಿಗೆ ಕೊಡಿಸಲಿಲ್ಲ. ಹಣ ವಾಪಸು ನೀಡುವಂತೆ ಕೇಳಲು ಕರೆ ಮಾಡಿ ಮಾತನಾಡಿದ್ದೆ’ ಎಂದು ಪದ್ಮರಾಜ್ ಹೇಳಿದರು. ನ್ಯಾಯಾಲಯದಲ್ಲಿ ಜಾಮೀನು ಸಿಕ್ಕ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಗೋಪಾಲಯ್ಯಗೆ ಜೀವ ಬೆದರಿಕೆ ಹಾಕಿದ್ದೇನೆ ಎಂಬುದು ಸತ್ಯಕ್ಕೆ ದೂರುವಾದ ಮಾತು. ಕೊಲೆ ಬೆದರಿಕೆ ಹಾಕುವ ವ್ಯಕ್ತಿ ನಾನಲ್ಲ. ಅವರಿಗೆ ದೇವರು ಅವರಿಗೆ ಒಳ್ಳೆದು ಮಾಡಲಿ’ ಎಂದರು. ‘2010ರಲ್ಲಿ ನನ್ನನ್ನು ಮೇಯರ್ ಮಾಡುವುದಾಗಿ ಹೇಳಿದ್ದ ಬಿಜೆಪಿ ಮುಖಂಡ ಆರ್.ಅಶೋಕ ₹ 1 ಕೋಟಿ ಪಡೆದಿದ್ದರು. ಇವತ್ತಿಗೂ ನನ್ನನ್ನು ಮೇಯರ್ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಆ ಹಣ ವಾಪಸ್ ತೆಗೆದುಕೊಂಡೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.