ADVERTISEMENT

Aero India 2025: ರಾಡಾರ್‌ಗೂ ಸಿಗದ ಯುದ್ದ ವಿಮಾನ

ದೇಶದ ರಕ್ಷಣಾ ಉಪಕರಣಗಳ ಸಾಮರ್ಥ್ಯ ಅನಾವರಣ

ಕೆ.ಎಸ್.ಸುನಿಲ್
Published 10 ಫೆಬ್ರುವರಿ 2025, 20:47 IST
Last Updated 10 ಫೆಬ್ರುವರಿ 2025, 20:47 IST
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದಲ್ಲಿ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ತಯಾರಿಸಿರುವ ಎಎಂಸಿಎ ಯುದ್ದ ವಿಮಾನ ಗಮನ ಸೆಳೆಯಿತು.   ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದಲ್ಲಿ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ತಯಾರಿಸಿರುವ ಎಎಂಸಿಎ ಯುದ್ದ ವಿಮಾನ ಗಮನ ಸೆಳೆಯಿತು.   ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್   

ಬೆಂಗಳೂರು: ‌ಯಲಹಂಕದ ವಾಯುನೆಲೆಯಲ್ಲಿ ಸೋಮವಾರದಿಂದ ಆರಂಭಗೊಂಡಿರುವ ಏರೊ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ತಯಾರಿಸಿರುವ ಐದನೇ ತಲೆಮಾರಿನ ಯುದ್ಧ ವಿಮಾನ (ಅಡ್ವಾನ್ಸ್ಡ್‌ ಮೀಡಿಯಂ ಕಾಂಬಾಟ್ ಏರ್ ಕ್ರಾಫ್ಟ್) ಗಮನ ಸೆಳೆಯುತ್ತಿದೆ.

ವಿವಿಧ ದೇಶಗಳ ರಕ್ಷಣಾ ಇಲಾಖೆ ಅಧಿಕಾರಿಗಳು, ಗಣ್ಯರು ಈ ಯುದ್ದ ವಿಮಾನ ವೀಕ್ಷಣೆ ಮಾಡಿದರು. ಇದರ ತಯಾರಿಕೆ ಮತ್ತು ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಭಾರತೀಯ ರಕ್ಷಣಾ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.

ನಾಲ್ಕನೇ ಪೀಳಿಗೆಯ ಎಲ್‌ಎಲ್‌ಎಎಫ್ ಎಂಕೆ-2 ಯುದ್ಧ ವಿಮಾನದ ನಂತರ ಐದನೇ ಪೀಳಿಗೆಯ ಈ ವಿಮಾನ ತಯಾರಾಗಿದೆ. 25 ಟನ್ ತೂಕವಿರುವ ಎಎಂಸಿಎ ಎರಡು ಎಂಜಿನ್‌ಗಳನ್ನು ಹೊಂದಿದ್ದು, 1.5 ಟನ್ ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದರು. 

ADVERTISEMENT

ರಾಡಾರ್‌ನಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಸಹ ಇದೆ. ತುರ್ತು ಹಾಗೂ ಯುದ್ದದ ಸಂದರ್ಭದಲ್ಲಿ ವಿಶ್ವದ ಯಾವುದೇ ದೇಶದ ರಾಡಾರ್‌ಗೂ ಇದನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಶತ್ರು ದೇಶಗಳ ವಿಮಾನ, ಶಸ್ತ್ರಾಸ್ತ್ರಗಳ ಮೇಲೆ ನಿಖರವಾಗಿ ದಾಳಿ ಮಾಡಿ, ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಅದರಲ್ಲೂ, ಬಹಳ ಕ್ಷಿಪ್ರವಾಗಿ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವುದು ಗಮನಾರ್ಹ.

ರಾಕೆಟ್ ದಾಳಿಗೆ ಬಳಸುವ ವಾಹನ, ಬಾಂಬ್‌ ಪತ್ತೆ ಮಾಡುವ ರೋಬೊ, ರಾತ್ರಿ ವೇಳೆಯೂ ಬಳಸುವ ಡ್ರೋನ್‌, ರಕ್ಷಣಾ ಪರಿಕರ, ಉಪಕರಣಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. 

ಹಲವು ರಾಷ್ಟ್ರಗಳ ರಕ್ಷಣಾ ಉಪಕರಣಗಳ ಮಾದರಿಗಳು ಪ್ರದರ್ಶನ ಮಳಿಗೆಯಲ್ಲಿವೆ. ಐದು ದಿನ ನಡೆಯುವ ಪ್ರದರ್ಶನದಲ್ಲಿ ಮೊದಲ ದಿನ ಸೋಮವಾರ 500ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ.

ಕೇಂದ್ರ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯುದ್ಧ ಸಂದರ್ಭದಲ್ಲಿ ರಾಕೆಟ್ ದಾಳಿಗೆ ಬಳಸುವ ವಾಹನ ತಯಾರಿಸಿದ್ದು, 44 ಸೆಕೆಂಡ್‌ಗಳಲ್ಲಿ 12 ರಾಕೆಟ್‌ಗಳನ್ನು ದಾಳಿಗೆ ಬಳಸಬಹುದು. ಈಗಾಗಲೇ ದೇಶದ 88 ಸೇನಾ ಘಟಕಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, 120 ವಾಹನಗಳು ಉತ್ಪಾದನೆ ಹಂತದಲ್ಲಿವೆ.

ಫಾಲ್ಕೊ ರೋಬಾಟಿಕ್ಸ್ ಸಂಸ್ಥೆ ತಯಾರಿಸಿರುವ ಥರ್ಮಲ್ ಡ್ರೋನ್ ಅನ್ನು ರಾತ್ರಿ ವೇಳೆಯೂ ಬಳಸಬಹುದು. 40 ನಿಮಿಷ ಹಾರಾಟ ನಡೆಸುವ ಸಾಮರ್ಥ್ಯ ಇದ್ದು, 20 ಕಿ.ಮೀ. ವರೆಗೂ ಸಂಚರಿಸಲಿದೆ. ಈ ಡ್ರೋನ್ ಬೆಲೆ ₹ 9.5 ಲಕ್ಷ. ಈಗಾಗಲೇ ಭಾರತೀಯ ಸೇನೆಯಲ್ಲಿ ಇದನ್ನು ಬಳಸಲಾಗುತ್ತಿದೆ.

ಪ್ರಾಜೆಕ್ಟ್ ಕುಶಾ ಹೆಸರಿನ ದೀರ್ಘ-ಶ್ರೇಣಿಯ ವಾಯು ರಕ್ಷಣಾ ಕ್ಷಿಪಣಿ ಸಹ ನೋಡಬಹುದಾಗಿದ್ದು, ಈ ಕ್ಷಿಪಣಿ ಸುಮಾರು 400 ಕಿ.ಮೀ. ದೂರದ ವೈಮಾನಿಕ ಗುರಿಗಳನ್ನು ಸುಲಭವಾಗಿ ಹೊಡೆದುರುಳಿಸವ ಸಾಮರ್ಥ್ಯ  ಹೊಂದಿದೆ. ಸೋಲಾರ್ ಇಂಡಸ್ಟ್ರೀಸ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ ಎಂದು ತಂತ್ರಜ್ಞರು ವಿವರಿಸಿದರು.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದಲ್ಲಿ ಎಚ್‌ಎಎಲ್‌ ನಿರ್ಮಿತ ಧ್ರುವ–ಎನ್‌.ಜಿ ಹೆಲಿಕ್ಯಾಪ್ಟರ್‌ನ ಫೋಟೊವನ್ನು ಮೊಬೈಲ್‌ನಲ್ಲಿ ಪ್ರೇಕ್ಷಕರು ಸೆರೆಹಿಡಿದರು  ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.  

ಹೆಲಿಕಾಪ್ಟರ್‌ನಲ್ಲಿ ಕುಳಿತುಕೊಳ್ಳುವ ಅವಕಾಶ

ಪ್ರದರ್ಶನದ ಮಳಿಗೆ ಬಳಿ ಇರಿಸಲಾಗಿದ್ದ ಎಚ್‌ಎಎಲ್‌ನ ಧ್ರುವ–ಎನ್‌.ಜಿ. ಹೆಲಿಕಾಪ್ಟರ್‌ ನೋಡಲು ಪ್ರೇಕ್ಷಕರು ಮುಗಿಬಿದ್ದರು. ಈ ಹೆಲಿಕಾಪ್ಟರ್‌ನಲ್ಲಿ ಜನರನ್ನು ಕರೆದೊಯ್ಯಬಹುದು ಹಾಗೂ ಏರ್ ಆಂಬುಲೆನ್ಸ್ ಆಗಿಯೂ ಬಳಸಬಹುದು. 11 ಮಂದಿ ಪ್ರಯಾಣಿಸಬಹುದಾಗಿದ್ದು ಮೊದಲ ಹೆಲಿಕಾಪ್ಟರ್‌ ಅನ್ನು ಪವನ್‌ ಹನ್ಸ್ ಸಂಸ್ಥೆಗೆ ಮಾರಾಟ ಮಾಡಲಾಗಿದೆ ಎಂದು ಎಚ್‌ಎಎಲ್ ಅಧಿಕಾರಿಗಳು ತಿಳಿಸಿದರು. ಆತ್ಮನಿರ್ಭರ್‌ ಯೋಜನೆಯಡಿ ನಿರ್ಮಿಸಿರುವ ಹೆಲಿಕಾಪ್ಟರ್‌ ಎದುರು ಪ್ರೇಕ್ಷಕರು ನಿಂತು ಫೋಟೊ ತೆಗೆಸಿಕೊಂಡರು. ಕೆಲವರಿಗೆ ಹೆಲಿಕಾಪ್ಟರ್ ಹತ್ತಿ ಕುಳಿತು ಫೋಟೊ ತೆಗೆಸಿಕೊಳ್ಳುವ ಅವಕಾಶವೂ ದೊರೆಯಿತು.

ಬಿಗಿ ಪೊಲೀಸ್ ಭದ್ರತೆ

ದೇಶ ವಿದೇಶದ ಗಣ್ಯರು ವಾಯುಪಡೆ ಅಧಿಕಾರಿಗಳು ಬಂದಿದ್ದರಿಂದ ವಾಯು ನೆಲೆಯ ಸುತ್ತಲೂ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಮೂರು ಹಂತದಲ್ಲಿ ಪ್ರೇಕ್ಷಕರನ್ನು ತಪಾಸಣೆ ನಡೆಸಿ ವೈಮಾನಿಕ ಪ್ರದರ್ಶನ ಸ್ಥಳಕ್ಕೆ ಬಿಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.