ADVERTISEMENT

ಜನಸೇವಕ ಯೋಜನೆ ಇನ್ನಷ್ಟು ಕಡೆಗೆ ವಿಸ್ತರಣೆ

ಯಲಹಂಕ: ಸಕಾಲ ಅರ್ಜಿ ವಿಲೇವಾರಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 5:43 IST
Last Updated 28 ಡಿಸೆಂಬರ್ 2019, 5:43 IST
ಯಲಹಂಕದಲ್ಲಿ ಗುರುವಾರ ಸಚಿವ ಸುರೇಶ್ ಕುಮಾರ್ ‘ಸಕಾಲ’ ಯೋಜನೆಯ ಅರ್ಜಿ ವಿಲೇವಾರಿ ಕುರಿತು ಪರಿಶೀಲನೆ ನಡೆಸಿದರು
ಯಲಹಂಕದಲ್ಲಿ ಗುರುವಾರ ಸಚಿವ ಸುರೇಶ್ ಕುಮಾರ್ ‘ಸಕಾಲ’ ಯೋಜನೆಯ ಅರ್ಜಿ ವಿಲೇವಾರಿ ಕುರಿತು ಪರಿಶೀಲನೆ ನಡೆಸಿದರು   

ಯಲಹಂಕ: 'ಅರ್ಜಿದಾರರ ಮನೆಬಾಗಿಲಿಗೆ ದಾಖಲೆಗಳನ್ನು ತಲುಪಿಸುವ ‘ಜನಸೇವಕ’ ಕಾರ್ಯಕ್ರಮವನ್ನು ಇನ್ನಷ್ಟು ಕ್ಷೇತ್ರಗಳಿಗೆ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ' ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ವಿವಿಧ ಇಲಾಖೆಗಳ ಕಚೇರಿಗಳಿಗೆ ಗುರುವಾರ ಭೇಟಿ ನೀಡಿದ ಅವರು ‘ಸಕಾಲ’ ಅರ್ಜಿಗಳ ವಿಲೇವಾರಿಯ ಪ್ರಗತಿಪರಿಶೀಲನೆ ನಡೆಸಿದರು.

ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರ ಈ ವರ್ಷದ ಆರಂಭದಲ್ಲಿ ಜನಸೇವಕ ಯೋಜನೆ ಆರಂಭಿಸಿದ್ದು, ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ವೃದ್ಧರನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಿರುವ ಈ ಯೋಜನೆಯನ್ನು ರಾಜ್ಯದ ಇತರೆ ಭಾಗಗಳಿಗೂ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಮುಂದಿನ ತಿಂಗಳು ಯಲಹಂಕದಲ್ಲಿ ಪ್ರಾಯೋಗಿಕ ಜಾರಿಗೆ ಸಂಬಂಧಿಸಿ ಅಧಿಕಾರಿಗಳ ಜೊತೆಗೂ ಸಚಿವರು ಚರ್ಚಿಸಿದರು.

ADVERTISEMENT

‘ಸಕಾಲ’ ಯೋಜನೆಯಡಿ ಅರ್ಜಿಗಳು ನಿಗದಿತ ಅವಧಿಯಲ್ಲಿ ವಿಲೇವಾರಿಯಾಗುತ್ತಿಲ್ಲ ಎಂಬ ದೂರುಗಳಿವೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಈ ಕುರಿತಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ‘ಅರ್ಜಿ ವಿಲೇವಾರಿಯಲ್ಲಿ ನಿರ್ಲಕ್ಷ್ಯ ಬೇಡ. ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು’ ಎಂದು ತಾಕೀತು ಮಾಡಿದರು.

‘23 ಇಲಾಖೆಗಳು ಸಕಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಲ್ಲ. ಯಲಹಂಕ ತಾಲ್ಲೂಕು ಅರ್ಜಿಗಳ ವಿಲೇವಾರಿಯಲ್ಲಿ 176ನೇ ಸ್ಥಾನದಲ್ಲಿದೆ. ಜನವರಿ ಅಂತ್ಯದ ವೇಳೆಗೆ 50ನೇ ಸ್ಥಾನಕ್ಕೆ ತರಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಚೇರಿಯಲ್ಲಿ ಸಕಾಲ ಯೋಜನೆ ಯ ಮಾಹಿತಿಯ ಫಲಕ ಇಲ್ಲದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸುರೇಶ್ ಕುಮಾರ್, ತಕ್ಷಣವೇ ಮಾಹಿತಿ ಫಲಕ ಅಳವಡಿಸುವಂತೆ ಸೂಚಿಸಿದರು.

ಶಾಸಕ ಎಸ್.ಆರ್.ವಿಶ್ವನಾಥ್, ತಹಶೀಲ್ದಾರ್ ಎನ್.ರಘುಮೂರ್ತಿ, ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಡಾ.ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.