ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುಸಾ ಪಾಳ್ಯದಲ್ಲಿ ಕಳೆದ ಅಕ್ಟೋಬರ್ 22ರಂದು ನಿರ್ಮಾಣ ಹಂತದ ಕಟ್ಟಡ ಕುಸಿದ ಘಟನೆ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ತಜ್ಞರು ಪೊಲೀಸರಿಗೆ ವರದಿ ಸಲ್ಲಿಸಿದ್ದಾರೆ.
ಕಟ್ಟಡ ಕುಸಿಯಲು ಕಾರಣವೇನು ಎಂಬುದನ್ನು ಪತ್ತೆಹಚ್ಚಿ ವರದಿ ಸಲ್ಲಿಸಲು ಪೊಲೀಸರು ಕೋರಿದ್ದರು. ಐಐಎಸ್‌ಸಿಯ ಪ್ರೊ.ಚಂದ್ರಕಿಶನ್ ಅವರ ನೇತೃತ್ವದ ತಂಡವು ದುರಂತದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ವರದಿ ತಯಾರಿಸಿತ್ತು. 10 ಪುಟಗಳ ವರದಿಯನ್ನು ಹೆಣ್ಣೂರು ಠಾಣೆಯ ಇನ್‌ಸ್ಪೆಕ್ಟರ್ ಅವರಿಗೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿವೇಶನದಲ್ಲಿದ್ದ ಮಣ್ಣು, ಕಟ್ಟಡ ನಿರ್ಮಾಣಕ್ಕೆ ಬಳಸಿದ್ದ ಸಿಮೆಂಟ್, ಎಂ–ಸ್ಯಾಂಡ್, ಸಿಮೆಂಟ್ ಹಾಗೂ ಇಟ್ಟಿಗೆ ಸೇರಿದಂತೆ ವಿವಿಧ ಸಾಮಗ್ರಿಗಳ ಮಾದರಿ ಸಂಗ್ರಹಿಸಿ ತಜ್ಞರು ಪರಿಶೀಲನೆ ನಡೆಸಿದ್ದರು. ಇದೀಗ ವರದಿ ಸಿದ್ಧಪಡಿಸಿ ಪೊಲೀಸರಿಗೆ ಸಲ್ಲಿಸಿದ್ದಾರೆ.
‘ಸಿಮೆಂಟ್ ಹಾಗೂ ಎಂ–ಸ್ಯಾಂಡ್ ಮಿಶ್ರಣವೂ ಉತ್ತಮವಾಗಿತ್ತು. ತಳಪಾಯದ ಆಳ ಸರಿಯಾಗಿ ತೆಗೆದಿರಲಿಲ್ಲ. ತಳಪಾಯದ ಸಾಮರ್ಥ್ಯ ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕಷ್ಟೇ ಸೂಕ್ತವಾಗಿತ್ತು. ಆದರೆ, ಆರು ಅಂತಸ್ತು ನಿರ್ಮಾಣ ಮಾಡಿದ್ದೇ ದುರಂತಕ್ಕೆ ಕಾರಣ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಕಟ್ಟಡ ನಿರ್ಮಾಣಕ್ಕೂ ಮೊದಲು ಆಳವಿದ್ದ ಸ್ಥಳವನ್ನು ಎತ್ತರಿಸಲಾಗಿತ್ತು. ಆ ಬಳಿಕ ಮಣ್ಣು ಪರೀಕ್ಷಿಸದೆ ಸಾಧಾರಣವಾಗಿ ಅಡಿಪಾಯ ಹಾಕಿದ್ದರು. ಕಡಿಮೆ ಪ್ರಮಾಣದಲ್ಲಿ ತಳಪಾಯ ಹಾಕಿದ್ದರಿಂದ ಕಟ್ಟಡದ ತೂಕ ಹೆಚ್ಚಾಗಿ ಪಿಲ್ಲರ್ಗಳು ಕುಸಿತಗೊಂಡಿದ್ದವು’ ಎಂದು ವಿವರಿಸಲಾಗಿದೆ.
ದುರಂತದಲ್ಲಿ ಬಿಹಾರ ಹಾಗೂ ಉತ್ತರ ಕರ್ನಾಟಕದ ಒಂಬತ್ತು ಕಾರ್ಮಿಕರು ಮೃತಪಟ್ಟಿದ್ದರು. ನಿರ್ಲಕ್ಷ್ಯ ಆರೋಪದಡಿ ಕಟ್ಟಡದ ಮಾಲೀಕ, ಗುತ್ತಿಗೆದಾರರನ್ನು ಹೆಣ್ಣೂರು ಠಾಣೆಯ ಪೊಲೀಸರು ಬಂಧಿಸಿದ್ದರು.
ಅವಘಡ ಸಂಬಂವಿಸಿದ್ದ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಲೋಕಾಯುಕ್ತರು ಭೇಟಿ ನೀಡಿ ಪರಿಶೀಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.