ADVERTISEMENT

ಐಎಎಸ್‌ ಅಧಿಕಾರಿ ಮಗುವಿಗೆ ಅವಧಿ ಮೀರಿದ ಲಸಿಕೆ

ಸಿಎಂಎಚ್‌ ಆಸ್ಪತ್ರೆ ವೈದ್ಯ, ನರ್ಸ್‌ ವಿರುದ್ಧ ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2018, 19:07 IST
Last Updated 14 ಅಕ್ಟೋಬರ್ 2018, 19:07 IST

ಬೆಂಗಳೂರು: ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ಅವರ ಮಗುವಿಗೆ ಅವಧಿ ಮೀರಿದ ಪೋಲಿಯೊ ಲಸಿಕೆ ನೀಡಿದ ಆರೋಪದಡಿ ಇಂದಿರಾನಗರದ ಸಿಎಂಎಚ್ ಆಸ್ಪತ್ರೆಯ ವೈದ್ಯ ಎಸ್.ಸುರೇಶ್ ಕುಮಾರ್ ಹಾಗೂ ಹಿರಿಯ ನರ್ಸ್ ಕೃಷ್ಣಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

2009ನೇ ಬ್ಯಾಚ್‌ನ ಅಧಿಕಾರಿಯಾದ ಪಲ್ಲವಿ, ತಮ್ಮ 10 ವಾರದ ಮಗುವಿಗೆ ಪೋಲಿಯೊ ಲಸಿಕೆ ಹಾಕಿಸಲೆಂದು ಅಕ್ಟೋಬರ್ 3ರಂದು ಆಸ್ಪತ್ರೆಗೆ ಹೋಗಿದ್ದರು. ‘ಮಗುವಿಗೆ ವೈದ್ಯ ಹಾಗೂ ನರ್ಸ್‌ ಅವಧಿ ಮೀರಿದ ಲಸಿಕೆ ನೀಡಿದ್ದಾಗಿ ಪಲ್ಲವಿ ದೂರು ನೀಡಿದ್ದರು’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್‌ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ವೈದ್ಯ ಹಾಗೂ ನರ್ಸ್‌ರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಅವರ ಹೇಳಿಕೆ ಪಡೆದ ನಂತರ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

ADVERTISEMENT

ದೂರಿನಲ್ಲೇನಿದೆ: ಪಲ್ಲವಿ ಅವರು ಪೊಲೀಸರಿಗೆ ನೀಡಿರುವ ದೂರಿನ ಪ್ರತಿ ಹಾಗೂ ಆರೋಪಿಗಳ ವಿರುದ್ಧ ದಾಖಲಾದ ಎಫ್‌ಐಆರ್ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ನನ್ನ ಮಗುವಿಗೆ ಪೋಲಿಯೊ ಲಸಿಕೆ ಹಾಕಿಸುವ ಸಂಬಂಧಬೆಂಗಳೂರು ನಗರ ಜಿಲ್ಲೆಯ ಉಪ ಔಷಧ ನಿಯಂತ್ರಕ ಮಲ್ಲಿಕಾರ್ಜುನ ನಾಗೂರ ಅವರನ್ನು ವಿಚಾರಿಸಿದ್ದೆ. ಇಂದಿರಾನಗರದ ಔಷಧಾಲಯಗಳಲ್ಲಿ ಲಸಿಕೆ ಲಭ್ಯವಿರುವುದಾಗಿ ಅವರು ಹೇಳಿದ್ದರು. ಜೊತೆಗೆ ಲಸಿಕೆ ಹಾಕಿಸಿಕೊಳ್ಳಲು ನೆರವು ನೀಡುವಂತೆ ಫಾರ್ಮಾಸಿಸ್ಟ್ ನಾಗರಾಜು ಅವರಿಗೆ ಸೂಚಿಸಿದ್ದರು’ ಎಂದು ಪಲ್ಲವಿ ದೂರಿನಲ್ಲಿ ಬರೆದಿದ್ದಾರೆ.

‘ಇಂದಿರಾನಗರದ ಸಿಎಂಎಚ್ ಆಸ್ಪತ್ರೆಗೆ ಹೋಗಿ, ಫಾರ್ಮಾಸಿಸ್ಟ್ ನಾಗರಾಜು ಅವರಿಗೆ ಕರೆ ಮಾಡಿದ್ದೆ. ಆಸ್ಪತ್ರೆಗೆ ಬಂದಿದ್ದ ನಾಗರಾಜು, ಅದೇ ಆಸ್ಪತ್ರೆಯ ಮಕ್ಕಳ ವೈದ್ಯ ಸುರೇಶ್ ಬಳಿ ಕರೆದೊಯ್ದಿದ್ದರು. ಆಗ ಸುರೇಶ್, ನಾಲ್ಕು ಮಾದರಿಯ ಲಸಿಕೆ ತರಲು ಚೀಟಿ ಬರೆದುಕೊಟ್ಟಿದ್ದರು. ಬಾಯೊಳಗೆ ಹಾಕುವ ಹನಿ (ಒಪಿವಿ) ಹೆಸರು ಕೂಡ ಚೀಟಿಯಲ್ಲಿತ್ತು. ಆದರೆ, ಔಷಧಾಲಯದಲ್ಲಿ ಒಪಿವಿ ಲಭ್ಯವಿಲ್ಲದಿದ್ದರಿಂದ, ಅದನ್ನು ಹೊರತುಪಡಿಸಿ 3 ಲಸಿಕೆಗಳನ್ನು ತಂದು ಕೊಟ್ಟಿದ್ದೆ.ಹಿರಿಯ ನರ್ಸ್‌ ಕೃಷ್ಣಮ್ಮ, 3 ಲಸಿಕೆಗಳನ್ನು ಮಗುವಿನ ಬಾಯಿಗೆ ಹಾಕಿದ್ದರು. ಅದರ ಜೊತೆಗೆ, ಗುಲಾಬಿ ಬಣ್ಣದ ಇನ್ನೊಂದು ಲಸಿಕೆಯ 2–3 ಹನಿ ಹಾಕಿದ್ದರು. ಅದು ಅವಧಿ ಮೀರಿದ ಲಸಿಕೆಯಾಗಿದ್ದು, ಅದರ ಉತ್ಪಾದನೆಯನ್ನೇ ನಿಷೇಧಿಸಲಾಗಿದೆ’.

‘ಅವಧಿ ಮೀರಿದ ಲಸಿಕೆ ಹಾಕಿದ್ದ ಬಗ್ಗೆ ನರ್ಸ್‌ರನ್ನು ಕೇಳಿದ್ದಕ್ಕೆ, ‘ವೈದ್ಯರ ಸೂಚನೆಯಂತೆ ಲಸಿಕೆ ಹಾಕಲಾಗಿದೆ’ ಎಂದಿದ್ದರು. ಲಸಿಕೆ ಹಾಕುವ ವೇಳೆಯಲ್ಲೂ ನರ್ಸ್, ವೈದ್ಯರ ಸೂಚನೆ ಪಾಲಿಸಿಲ್ಲ. ಮಗುವಿಗೆ ಲಸಿಕೆ ಹಾಕುವಾಗ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

ಆರೋಗ್ಯಾಧಿಕಾರಿಗೂ ದೂರು ಕೊಟ್ಟಿದ್ದರು: ತಮ್ಮ ಮಗುವಿಗೆ ಆಸ್ಪತ್ರೆಯೊಂದರಲ್ಲಿ ಹಿಂಸೆ ಕೊಟ್ಟಿದ್ದಾರೆ ಎಂದು ಆರೋಪಿಸಿ ಪಲ್ಲವಿ ಅಕುರಾತಿ ಅವರು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿಗೆ ಈ ಹಿಂದೆ ದೂರು ಕೊಟ್ಟಿದ್ದರು.

‘ಐಎಎಸ್‌ ಅಧಿಕಾರಿಗೇ ಈ ರೀತಿಯ ಕೆಟ್ಟ ಅನುಭವ ಆಗಿದೆ. ಇನ್ನು ಸಾಮಾನ್ಯ ಜನರಿಗೆ ಈ ತರಹದ ಆಸ್ಪತ್ರೆಗಳಲ್ಲಿ ಎಂತಹ ಚಿಕಿತ್ಸೆ ದೊರೆಯಲಿದೆ. ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಪಲ್ಲವಿ ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.