ADVERTISEMENT

ಮನೆಯಲ್ಲಿ ಸ್ಫೋಟಕ ಮಾರಾಟ: ಮಹಿಳೆ ಬಂಧನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 1:04 IST
Last Updated 19 ನವೆಂಬರ್ 2019, 1:04 IST

ಬೆಂಗಳೂರು: ಮನೆಯಲ್ಲಿ ಸ್ಫೋಟಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಬೇಗೂರು ಬಳಿಯ ಮೈಲಸಂದ್ರದಲ್ಲಿ ಬೊಡಗುಂಡೆ ಬಂಡೆ ಸಮೀಪ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಮಾರಿಯಮ್ಮ (40) ಬಂಧಿತ ಮಹಿಳೆ. ಆಕೆಯ ಮನೆಯಲ್ಲಿದ್ದ 10 ಕೆ.ಜಿ. ಯೂರಿಯಾ, 320 ಜಿಲೆಟಿನ್ ಕಡ್ಡಿ ಮತ್ತು 195 ಕೇಪ್ಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬಂಡೆ ಸ್ಫೋಟಿಸಲು ಬಳಸುವ ಜಿಲೆಟಿನ್ ಕಡ್ಡಿ ಮತ್ತು ಪ್ರಾಣಿಗಳನ್ನು ಬೇಟೆಯಾಡಲು ಬಳಸುವ ಕೇಪ್ಸ್‌ಗಳನ್ನು ಮಾರಿಯಮ್ಮ ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿರುವ ಬಗ್ಗೆ
ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.

ADVERTISEMENT

ಮಫ್ತಿಯಲ್ಲಿ ಖಾಸಗಿ ವಾಹನದಲ್ಲಿ ಮಹಿಳೆ ಮನೆಯ ಬಳಿಗೆ ತೆರಳಿದ ಪೊಲೀಸರು, ಜಿಲೆಟಿನ್ ಕಡ್ಡಿ ಬೇಕೆಂದು ಕೇಳಿದ್ದರು. ಮಾರಿಯಮ್ಮ, ಕೊಡುವುದಾಗಿ ಹೇಳಿ ಮನೆ ಹಿಂಭಾಗದ ಕೊಠಡಿಗೆ ಕರೆದೊಯ್ದು ಸ್ಫೋಟಕಗಳನ್ನು ತೋರಿಸಿದ್ದಳು. ತಕ್ಷಣ ಪೊಲೀಸರು ಮಹಿಳೆಯನ್ನು ‌ವಶಕ್ಕೆ ಪಡೆದು ಸ್ಫೋಟಕಗಳನ್ನು ಜಪ್ತಿ ಮಾಡಿದ್ದಾರೆ. ಸ್ಫೋಟಕ ವಸ್ತುಗಳನ್ನು ಮಾರಿಯಮ್ಮ ಎಲ್ಲಿಂದ ತಂದಿದ್ದಳು ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.