ಬೆಂಗಳೂರು: ನಗರದ ಕಲಾಸಿಪಾಳ್ಯ ಬಿಎಂಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಶೌಚಾಲಯದ ಬಳಿಯಿದ್ದ ಚೀಲದಲ್ಲಿ ಸ್ಫೋಟಕ ವಸ್ತುಗಳು ಪತ್ತೆ ಆಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಚೀಲದಲ್ಲಿ ಆರು ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೊನೇಟರ್ ಪತ್ತೆಯಾಗಿವೆ. ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಬಂದ ಕಲಾಸಿಪಾಳ್ಯ ಠಾಣೆ ಠಾಣೆಯ ಪೊಲೀಸರು, ಬಾಂಬ್ ತಪಾಸಣೆ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿ ಜಿಲೆಟಿನ್ ಕಡ್ಡಿ ಹಾಗೂ ಡಿಟೊನೇಟರ್‌ಗಳನ್ನು ವಶಕ್ಕೆ ಪಡೆದುಕೊಂಡರು. ನಿಲ್ದಾಣದ ಸುತ್ತಮುತ್ತ ಶ್ವಾನ ದಳ ಸಹ ತಪಾಸಣೆ ನಡೆಸಿತು.
‘ನಿಲ್ದಾಣದ ಎಟಿಎಸ್ ಮಲ್ಲಪ್ಪ ಅವರು ನೀಡಿದ ದೂರು ಆಧರಿಸಿ ಕಲಾಸಿಪಾಳ್ಯ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಯ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಬೆಳಿಗ್ಗೆ 9ಕ್ಕೆ ಬಂದು ಬಿಎಂಟಿಸಿ ಬಸ್ ನಿಲ್ದಾಣದ ಸುತ್ತಮುತ್ತ ಪರಿಶೀಲನೆ ನಡೆಸಿದ್ದೆ. ಆ ಸಂದರ್ಭದಲ್ಲಿ ಯಾವುದೇ ಚೀಲ ಹಾಗೂ ಬ್ಯಾಗ್ ಪತ್ತೆ ಆಗಿರಲಿಲ್ಲ. ಆದರೆ, ಮಧ್ಯಾಹ್ನ 1.15ರ ಸುಮಾರಿಗೆ ಭದ್ರತಾ ಸಿಬ್ಬಂದಿ ಪ್ರಭಾವತಿ ಹಾಗೂ ರಾಜು ಬಂದು ಶೌಚಾಲಯದ ಬಳಿ ಯಾವುದೋ ಚೀಲ ಇಡಲಾಗಿತ್ತು ಎಂದು ತಂದು ತೋರಿಸಿದ್ದರು. ತಕ್ಷಣವೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪರಿಶೀಲಿಸಿದಾಗ ಸ್ಫೋಟ ವಸ್ತುಗಳು ಪತ್ತೆಯಾದವು. ಕಲಾಸಿಪಾಳ್ಯ ಬಸ್ ನಿಲ್ದಾಣವು ಜನದಟ್ಟಣೆ ಪ್ರದೇಶವಾಗಿದ್ದು, ಸಾರ್ವಜನಿಕರ ಪ್ರಾಣ ಹಾಗೂ ಆಸ್ತಿಗೆ ಹಾನಿ ಮಾಡುವ ದುರುದ್ದೇಶದಿಂದ ಸ್ಫೋಟಕ ವಸ್ತುಗಳನ್ನು ಇಟ್ಟು ಹೋಗಲಾಗಿದೆ’ ಎಂದು ನೀಡಿದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಮೇಲ್ನೋಟಕ್ಕೆ ಕ್ವಾರಿಗಳಿಗೆ ಬಳಸಲು ಜಿಲೆಟಿನ್ ಕೊಂಡೊಯ್ಯುತ್ತಿರುವಂತೆ ಕಾಣಿಸಿದೆ. ದುಷ್ಕೃತ್ಯ ಎಸಗುವುದೇ ಆಗಿದ್ದರೆ ಅವುಗಳನ್ನು ಜೋಡಣೆ ಮಾಡಿಟ್ಟು ಹೋಗುತ್ತಿದ್ದರು. ಜಿಲೆಟಿನ್ ಹಾಗೂ ಡಿಟೊನೇಟರ್ ಅನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ನಿಲ್ದಾಣದಲ್ಲಿ ಖಾಕಿ ಸಮವಸ್ತ್ರ ಧರಿಸಿದ್ದ ಬಿಎಂಟಿಸಿ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಅದನ್ನು ಕಂಡು ಭಯಗೊಂಡ ವ್ಯಕ್ತಿ, ಚೀಲವನ್ನು ನಿಲ್ದಾಣದಲ್ಲೇ ಬಿಟ್ಟು ಹೋಗಿರುವ ಸಾಧ್ಯತೆಯಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.