ADVERTISEMENT

ನಿವೃತ್ತ ನೌಕರರಿಗೂ ಹೆಲ್ತ್‌ ಕಾರ್ಡ್ ಸೌಕರ್ಯ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 21:29 IST
Last Updated 5 ಆಗಸ್ಟ್ 2021, 21:29 IST

ಬೆಂಗಳೂರು: ಬಿಬಿಎಂಪಿಯಲ್ಲಿ 30ಕ್ಕೂ ವರ್ಷಗಳಿಗೂ ಅಧಿಕ ಕಾಲ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವವರಿಗೂ ಆರೋಗ್ಯ ಕಾರ್ಡ್‌ನ ಅಡಿ ಸೌಲಭ್ಯ ಒದಗಿಸಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತುನೌಕರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.

ಈ ಕುರಿತು ಸಂಘವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಗುರುವಾರ ಮನವಿ ಸಲ್ಲಿಸಿದೆ.

‘ಬಿಬಿಎಂಪಿಯಲ್ಲಿ ದೀರ್ಘ ಕಾಲ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನೌಕರರು ಒತ್ತಡದ ಕೆಲಸ ನಿರ್ವಹಿಸಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅಂತಹ ನೌಕರರು ನಿವೃತ್ತರಾದ ಬಳಿಕ ನಿವೃತ್ತಿ ವೇತನ ಮತ್ತು ಗಳಿಕೆ ರಜೆ ಮೊತ್ತವನ್ನು ಆಸ್ಪತ್ರೆ ವೆಚ್ಚಕ್ಕಾಗಿ ಬಳಸಬೇಕಾದ ಅನಿವಾರ್ಯ ಸ್ಥಿತಿ ಎದುರಿಸುತ್ತಿದ್ದಾರೆ. ಕೆಲವು ಅಧಿಕಾರಿಗಳು, ನೌಕರರು ಹಾಗೂ ಅವರ ಪತಿ ಅಥವಾ ಪತ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ವೈದ್ಯಕೀಯ ವೆಚ್ಚಕ್ಕಾಗಿಯೇ ₹ 5ಲಕ್ಷದಿಂದ ₹ 10 ಲಕ್ಷದವರೆಗೂ ವ್ಯಯಿಸಿ ಸಂಕಷ್ಟದ ಸ್ಥಿತಿ ತಲುಪಿದ್ದಾರೆ. ಇಂತಹವರಿಗೆ ನೆರವಾಗುವ ಉದ್ದೇಶದಿಂದ ಬಿಬಿಎಂಪಿ ಆರೋಗ್ಯ ಕಾರ್ಡ್‌ ಸೌಲಭ್ಯವನ್ನು ಅವರಿಗೂ ವಿಸ್ತರಿಸಬೇಕಾದ ಅಗತ್ಯವಿದೆ’ ಎಂದು ಸಂಘದ ಅಧ್ಯಕ್ಷ ಎ.ಅಮೃತ ರಾಜ್‌ ತಿಳಿಸಿದರು.

ADVERTISEMENT

‘ಕೇಂದ್ರ ಸರ್ಕಾರದ ಹಾಗೂ 20 ರಾಜ್ಯಗಳ ಸರ್ಕಾರಿ ನೌಕರರು ನಿವೃತ್ತಿ ಬಳಿಕವೂ ಅವರ ಹಾಗೂ ಅವರ ಪತಿ/ ಪತ್ನಿಯ ಚಿಕಿತ್ಸೆಗೆ ಆರೋಗ್ಯ ಕಾರ್ಡ್‌ ಸೌಲಭ್ಯ ಪಡೆಯಲು ಈಗಾಗಲೇ ಅವಕಾಶ ಕಲ್ಪಿಸಲಾಗಿದೆ. ಬಿಬಿಎಂಪಿ ನೌಕರರಿಗೂ ಈ ಸೌಲಭ್ಯ ಒದಗಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.