ADVERTISEMENT

ನಮ್ಮ ಸಮುದಾಯವನ್ನು ಬಲಹೀನಗೊಳಿಸುತ್ತಿರುವ ಹೊರಗಿನ ಶಕ್ತಿಗಳು: ಶಂಕರ್‌ ಬಿದರಿ

ಶಿವಕುಮಾರ ಸ್ವಾಮೀಜಿ ಜಯಂತಿಯಲ್ಲಿ ಶಂಕರ್‌ ಬಿದರಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 16:11 IST
Last Updated 27 ಏಪ್ರಿಲ್ 2025, 16:11 IST
ಬಸವ ವಕೀಲ್ ಬ್ರಿಗೇಡ್ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವದಲ್ಲಿ ಎಸ್. ಕಲ್ಯಾಣ್ ಬಸವರಾಜು, ನ್ಯಾ. ಬಿ.ಎಸ್. ಪಾಟೀಲ, ಶಂಕರ್ ಮಹಾದೇವ್‌ ಬಿದರಿ, ಪ್ರಮೀಳಾ ನೇಸರ್ಗಿ, ಶಿವಬಸವ ಸ್ವಾಮೀಜಿ ಅವರು ಸಿದ್ಧಗಂಗಾ ಶಿವಕುಮಾರ್ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಪ್ರಜಾವಾಣಿ ಚಿತ್ರ
ಬಸವ ವಕೀಲ್ ಬ್ರಿಗೇಡ್ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವದಲ್ಲಿ ಎಸ್. ಕಲ್ಯಾಣ್ ಬಸವರಾಜು, ನ್ಯಾ. ಬಿ.ಎಸ್. ಪಾಟೀಲ, ಶಂಕರ್ ಮಹಾದೇವ್‌ ಬಿದರಿ, ಪ್ರಮೀಳಾ ನೇಸರ್ಗಿ, ಶಿವಬಸವ ಸ್ವಾಮೀಜಿ ಅವರು ಸಿದ್ಧಗಂಗಾ ಶಿವಕುಮಾರ್ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹೊರಗಿನ ಶಕ್ತಿಗಳು ನಮ್ಮ ಸಮುದಾಯವನ್ನು ಬಲಹೀನಗೊಳಿಸುತ್ತಿವೆ. ನಾವು ಪರಸ್ಪರ ಸಹಕಾರ ನೀಡುತ್ತಾ ಒಗ್ಗಟ್ಟಾಗಿರಬೇಕೇ ಹೊರತು ಕಾಲೆಳೆಯಲು ಹೋಗಬಾರದು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್‌ ಮಹಾದೇವ ಬಿದರಿ ಸಲಹೆ ನೀಡಿದರು.

ಬಸವ ವಕೀಲ್‌ ಬ್ರಿಗೇಡ್‌ ಭಾನುವಾರ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿ ಅವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಪರಸ್ಪರ ಗೌರವ ಕೊಟ್ಟು ಸಹಕಾರ ನೀಡಲು ಸಾಧ್ಯವಾಗದೇ ಇದ್ದರೆ ಬಾಯಿ ಮುಚ್ಚಿ ಕುಳಿತುಕೊಳ್ಳಬೇಕು. ನಮ್ಮ ಪಾಲಿನಲ್ಲಿ ಶೇಕಡ ಐದೋ ಹತ್ತೋ ಬೇರೆಯವರಿಗೆ ಹಂಚೋಣ. ಉಳಿದ ಶೇ 90ರಷ್ಟು ನಮಗೇ ಸಿಗಬೇಕು. ಪರಿಸ್ಥಿತಿ ಸರಿ ಇಲ್ಲ. ನಾವು ಜಾಗೃತರಾಗಿರಬೇಕು. ಏನು ಹೇಳಲು ಹೊರಟಿದ್ದೀನಿ ಎಂಬುದು ನಿಮಗೆಲ್ಲ ಅರ್ಥವಾಗುತ್ತದೆ. ಬಿಡಿಸಿ ಹೇಳುವುದಿಲ್ಲ’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಮಾತನಾಡಿ, ‘ತಾನು ನಂಬಿದ ಸಿದ್ಧಾಂತವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಕಾರ್ಯರೂಪಕ್ಕೆ ತಂದವರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ. ಕಾಯಕ ತತ್ವ ಮತ್ತು ವಿದ್ಯಾದಾನವನ್ನು ಕೊನೇ ತನಕ ಮಾಡಿದರು’ ಎಂದು ಸ್ಮರಿಸಿದರು.

‘ಜಾತಿ ಹೊಡೆದೋಡಿಸುವ ಪ್ರಯತ್ನ, ಸರಳ ಜೀವನ, ವಚನ ವಿಚಾರಧಾರೆ, ಎಲ್ಲವನ್ನು ಪ್ರೀತಿ ಮತ್ತು ಸಮಾನತೆಯಿಂದ ಕಾಣುವುದು ಅವರ ಚಿಂತನೆಗಳಾಗಿದ್ದವು. ಮಕ್ಕಳಿಗೆ ಊಟ, ವಸತಿ ನೀಡಿ, ವಿದ್ಯಾದಾನ ಮಾಡುವುದರ ಜೊತೆಗೆ ಸಮಾಜಕ್ಕೆ ತನ್ನ ವಿಚಾರಧಾರೆಗಳನ್ನು ಕಲಿಸಿಕೊಟ್ಟರು. ಆದರೆ, ನಾವು ಕಲಿತಿದ್ದೇವೆಯೇ ಎಂಬುದಷ್ಟೇ ಉಳಿದಿರುವ ಪ್ರಶ್ನೆ’ ಎಂದು ಹೇಳಿದರು.

‘12ನೇ ಶತಮಾನದಿಂದಲೇ ಕಲಿಸಲು ವಚನಕಾರರು ಆರಂಭಿಸಿದ್ದರು. ಕಲಿಸುವ ಪ್ರಕ್ರಿಯೆ ಈಗಲೂ ಮುಂದುವರಿದಿದೆ. ಅಂಗಲಿಂಗ ಸಾಧನೆ ಅಂದರೆ ದೇಹ ಮತ್ತು ದೇವನ ಸಂಬಂಧ, ಲೋಕಮುಖಿ ನೈತಿಕತೆ, ಸಮಾನ ಸಮಾಜ ಮತ್ತು ಕಾಯಕ ಧರ್ಮ ಪ್ರತಿಪಾದನೆಯನ್ನು ಶರಣರು ಮಾಡಿದ್ದರು. ಆದರೆ, ಈಗ ತನ್ಮಯತೆಯಿಂದ, ಸೇವಾ ಮನೋಭಾವದಿಂದ ನಾವು ಕೆಲಸ ಮಾಡುತ್ತಿದ್ದೇವೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು’ ಎಂದು ಹೇಳಿದರು.

ಬೆಂಗಳೂರು ದೊಡ್ಡಮಠದ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭಾರತ ಸರ್ಕಾರದ ಮಾಜಿ ಅಡಿಷನಲ್‌ ಸಾಲಿಸಿಟರ್‌ ಜನರಲ್‌ ಎಸ್‌. ಕಲ್ಯಾಣ ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್‌ ವಕೀಲೆ ಪ್ರಮೀಳಾ ನೇಸರ್ಗಿ, ವಕೀಲ ಆರ್‌.ಬಿ. ಸದಾಶಿವಪ್ಪ, ಬೆಂಗಳೂರು ವಕೀಲರ ಸಂಘದ ಖಜಾಂಚಿ ಶ್ವೇತಾ ರವಿಶಂಕರ್‌, ಉಪಾಧ್ಯಕ್ಷ ಗಿರೀಶ್‌ ಕುಮಾರ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.