ADVERTISEMENT

ಅಧಿಕಾರಿಗಳನ್ನು ಸಿಐಡಿ ವಶಕ್ಕೆ ಪಡೆಯುವ ಮೂಲಕ ಸುಲಿಗೆ ಸಾಬೀತಾಗಿದೆ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 18:29 IST
Last Updated 20 ಆಗಸ್ಟ್ 2023, 18:29 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎನ್ನಲಾದ ಕೃಷಿ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಿಐಡಿ ವಶಕ್ಕೆ ಪಡೆಯುವ ಮೂಲಕ, ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ಹಾಗೂ ಸಚಿವರಿಂದ ಸುಲಿಗೆ ನಡೆಯುತ್ತಿದೆ ಎನ್ನುವುದು ಸಾಬೀತಾಗಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಭಾನುವಾರ ಜರಗನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆ ಪತ್ರವು ನಕಲಿಯೋ, ಅಸಲಿಯೋ ಎನ್ನುವುದು ಹಾಗಿರಲಿ. ಆದರೆ, ಕೃಷಿ ಇಲಾಖೆಯಲ್ಲಿ ಸುಲಿಗೆ, ವರ್ಗಾವಣೆ ದಂಧೆ ನಡೆಯುತ್ತಿರುವುದು ಅಸಲಿ ಎನ್ನುವುದು ಗೊತ್ತಾಯಿತಲ್ಲ’ ಎಂದರು.

‘ಅಧಿಕಾರಿಗಳು ಪತ್ರ ಯಾಕೆ ಬರೆದರು? ಅವರು ಮೈಸೂರಿನವರಾದರೂ ಆಗಲಿ ಅಥವಾ ಮಂಡ್ಯದವರಾದರೂ ಆಗಲಿ. ಸತ್ಯ ಏನೆಂಬುದು ಬಯಲಿಗೆ ಬಂತು’ ಎಂದರು.

‘ಆರೋಪಿ ಸ್ಥಾನದಲ್ಲಿರುವ ಸಚಿವರೇ ಪ್ರತಿಯೊಂದಕ್ಕೂ ಹೇಳಿಕೆ ಕೊಡುತ್ತಿದ್ದಾರೆ. ಸಿಐಡಿ ಪೊಲೀಸರು ತನಿಖಾ ವರದಿಯನ್ನು ಗೃಹ ಸಚಿವರಿಗೆ ಕೊಡುತ್ತಾರೋ ಅಥವಾ ಮುಖ್ಯಮಂತ್ರಿ ಅವರಿಗೆ ಕೊಡುತ್ತಾರೋ? ಇಲ್ಲವೇ ಆರೋಪಿ ಸ್ಥಾನದಲ್ಲಿರುವ ಸಚಿವರಿಗೆ ಎಲ್ಲಾ ಮಾಹಿತಿಯನ್ನು ಸೋರಿಕೆ ಮಾಡಿತ್ತಾರೋ? ಇದೇನು ತನಿಖೆಯಾ’ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.