ADVERTISEMENT

ರಾಷ್ಟ್ರದಲ್ಲಿ ಬೇಡಿಕೆಯಷ್ಟು ಸಿಗದ ಕಣ್ಣು: ಭುಜಂಗಶೆಟ್ಟಿ

ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗಶೆಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 22:07 IST
Last Updated 6 ಸೆಪ್ಟೆಂಬರ್ 2022, 22:07 IST
ನಗರದ ನಾರಾಯಣ ನೇತ್ರಾಲಯದಲ್ಲಿ ಮಂಗಳವಾರ 37ನೇ ನೇತ್ರದಾನ ಪಾಕ್ಷಿಕದ ಅಂಗವಾಗಿ ನಡೆದ ಸೈಕ್ಲಥಾನ್‌ಗೆ ನೇತ್ರಾಲಯದ ಅಧ್ಯಕ್ಷ ಡಾ.ಭುಜಂಗಶೆಟ್ಟಿ ಅವರು ಚಾಲನೆ ನೀಡಿದರು
ನಗರದ ನಾರಾಯಣ ನೇತ್ರಾಲಯದಲ್ಲಿ ಮಂಗಳವಾರ 37ನೇ ನೇತ್ರದಾನ ಪಾಕ್ಷಿಕದ ಅಂಗವಾಗಿ ನಡೆದ ಸೈಕ್ಲಥಾನ್‌ಗೆ ನೇತ್ರಾಲಯದ ಅಧ್ಯಕ್ಷ ಡಾ.ಭುಜಂಗಶೆಟ್ಟಿ ಅವರು ಚಾಲನೆ ನೀಡಿದರು   

ಬೆಂಗಳೂರು: ‘ರಾಷ್ಟ್ರದಲ್ಲಿ ಪ್ರತಿವರ್ಷ 2 ಲಕ್ಷ ಕಣ್ಣುಗಳ ಸಂಗ್ರಹದ ಗುರಿಯಿದ್ದರೂ ಕೇವಲ 60 ಸಾವಿರದಷ್ಟು ಕಣ್ಣುಗಳನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗುತ್ತಿದೆ’ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗಶೆಟ್ಟಿ ಹೇಳಿದರು.

ನಗರದ ನಾರಾಯಣ ನೇತ್ರಾಲಯದಲ್ಲಿ ಮಂಗಳವಾರ ನಡೆದ 37ನೇ ನೇತ್ರದಾನ ಪಾಕ್ಷಿಕದಲ್ಲಿ ಅವರು ಮಾತನಾಡಿದರು.

‘ಕೊರೊನಾ ಕಾರಣಕ್ಕೆ ಕಣ್ಣುಗಳ ಸಂಗ್ರಹ ಕಡಿಮೆಯಾಗಿದೆ. ಆರಂಭದಲ್ಲಿ ಕೊರೊನಾ ಹೇಗೆ ಹಬ್ಬುತ್ತಿದೆ ಎಂಬ ಅರಿವು ಇರಲಿಲ್ಲ. ಮೃತಪಟ್ಟವರ ಕಣ್ಣುಗಳನ್ನು ಸಂಗ್ರಹಿಸದಂತೆ ಕೇಂದ್ರವೇ ತಿಳಿಸಿತ್ತು’ ಎಂದರು.

ADVERTISEMENT

‘ಬೇಡಿಕೆಯಷ್ಟು ಕಣ್ಣುಗಳ ಸಂಗ್ರಹವಾಗುತ್ತಿಲ್ಲ. ಕಣ್ಣಿನಲ್ಲಿ ಗಾಯ, ಹುಣ್ಣುಗಳಾದರೆ ಶಾಶ್ವತವಾಗಿ ಕಣ್ಣನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ದಿನಕ್ಕೆ 300ರಿಂದ 400 ಮಂದಿ ಮೃತಪಡುತ್ತಿದ್ದಾರೆ. ಆದರೆ, ಇವುಗಳಲ್ಲಿ 8ಕ್ಕಿಂತ ಕಡಿಮೆ ಕಣ್ಣುಗಳನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಕಾರ್ನಿಯಾದ ಕುರುಡುತನವನ್ನು ನೇತ್ರದಾನದಿಂದ ಕಸಿ ಮಾಡುವ ಮೂಲಕ ಚಿಕಿತ್ಸೆ ನೀಡಬಹುದು. ಮಾನವ ಅಂಗಾಂಶಕ್ಕೆ ಪರ್ಯಾಯ ಇಲ್ಲ’ ಎಂದು ಹೇಳಿದರು.

‘ದೇಶದಲ್ಲಿ 15 ಲಕ್ಷ ಜನರಿಗೆ ಕಾರ್ನಿಯಾದ ಅಂಧತ್ವವಿದ್ದು, ಕಾರ್ನಿಯಾ ಕಸಿಗಾಗಿ ಕಾಯುತ್ತಿದ್ಧಾರೆ. ನೇತ್ರದಾನದ ಮೂಲಕ ಅಂಧತ್ವ ಹೋಗಲಾಡಿಸಲು ಸಾಧ್ಯವಿದೆ. ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿದರೆ ಮರಣದ ನಂತರ ಆರು ಗಂಟೆಯಲ್ಲಿ ಕಣ್ಣು ಸಂಗ್ರಹಿಸಲಾಗು
ವುದು’ಎಂದರು.

‘ನಮ್ಮ ನೇತ್ರ ಬ್ಯಾಂಕ್‌ನಲ್ಲಿ 28 ವರ್ಷಗಳಲ್ಲಿ 70 ಸಾವಿರ ಕಣ್ಣು ಸಂಗ್ರಹಿಸಲಾಗಿತ್ತು. ಪುನೀತ್‌ ರಾಜಕುಮಾರ್‌ ಅವರ ಕಣ್ಣು ಸಂಗ್ರಹದ ಬಳಿಕ ಜಾಗೃತಿ ಹೆಚ್ಚಾಗಿದೆ. 85 ಸಾವಿರ ಮಂದಿ ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿದ್ದಾರೆ’ ಎಂದರು.

ಇದೇ ವೇಳೆ ಹರೀಶ್‌ ನಂಜಪ್ಪ ಸ್ಮರಣಾರ್ಥ ಸ್ಥಾಪಿಸಿದ ವಾರ್ಷಿಕ ನೇತ್ರದಾನ ಪ್ರಶಸ್ತಿಯನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ನೀಡಲಾಯಿತು. ಗುರುದೇವ್‌, ಎಸ್.ಕೆ.ಮಿಠಲ್‌, ಡಾ.ಯತೀಶ್‌, ಡಾ.ಶಾಂತಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.