ADVERTISEMENT

ಆರ್ಥಿಕ ಸಂಕಷ್ಟ ಲೆಕ್ಕಿಸದೆ ವಚನ ಸಂರಕ್ಷಿಸಿದ ಹಳಕಟ್ಟಿ: ಕೆ.ಎಂ. ಗಾಯಿತ್ರಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಚನ ಸಾಹಿತ್ಯ ಸಂರಕ್ಷಣಾ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:59 IST
Last Updated 2 ಜುಲೈ 2025, 15:59 IST
ಸಮಾರಂಭದಲ್ಲಿ ದಕ್ಷ ಅಕಾಡೆಮಿ ಕಾಲೇಜಿನ ದಕ್ಷತರಂಗ ತಂಡದ ವಿದ್ಯಾರ್ಥಿಗಳು ಕಂಸಾಳೆ ನೃತ್ಯ ಪ್ರದರ್ಶಸಿದರು
ಪ್ರಜಾವಾಣಿಚಿತ್ರ 
ಸಮಾರಂಭದಲ್ಲಿ ದಕ್ಷ ಅಕಾಡೆಮಿ ಕಾಲೇಜಿನ ದಕ್ಷತರಂಗ ತಂಡದ ವಿದ್ಯಾರ್ಥಿಗಳು ಕಂಸಾಳೆ ನೃತ್ಯ ಪ್ರದರ್ಶಸಿದರು ಪ್ರಜಾವಾಣಿಚಿತ್ರ    

ಬೆಂಗಳೂರು: ‘ಆರ್ಥಿಕ ಸಂಕಷ್ಟವನ್ನೂ ಲೆಕ್ಕಿಸದೆ ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯ ಸಂರಕ್ಷಿಸಿದರು. ವಚನ ವಿಚಾರಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ ಅಭಿಪ್ರಾಯಪಟ್ಟರು.

ಫ.ಗು.ಹಳಕಟ್ಟಿ ಅವರ ಜನ್ಮ ದಿನದ ಅಂಗವಾಗಿ ಇಲಾಖೆಯು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

‘ಫ.ಗು. ಹಳಕಟ್ಟಿ ಅವರು ವಚನ ಸಂರಕ್ಷಣೆ ಜತೆಗೆ ಕೃತಿಗಳನ್ನೂ ರಚಿಸಿದ್ದಾರೆ. ಹಂಚಿ ಹೋಗಿದ್ದ ವಚನಗಳನ್ನು ಮನೆ ಮನೆಗೆ ತೆರಳಿ ಸಂಗ್ರಹಿಸಿದರು. ತಾಳೆಗರಿಯಲ್ಲಿದ್ದ ವಚನಗಳನ್ನು ಮುದ್ರಿಸುವ ಕೆಲಸ ಮಾಡಿದರು. ಮನೆಯಲ್ಲಿಯೇ ಮುದ್ರಣಾಲಯ ಪ್ರಾರಂಭಿಸಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಇಷ್ಟಾದರೂ ಅವರು ತಮ್ಮ ಕಾಯಕ ಬಿಡಲಿಲ್ಲ. ಇದರಿಂದಾಗಿ ಅವರು ವಚನ ಪಿತಾಮಹರೆಂದು ಪ್ರಖ್ಯಾತರಾದರು’ ಎಂದು ಹೇಳಿದರು.

ADVERTISEMENT

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ‘ಕನ್ನಡದ ನಿಜವಾದ ಫಕೀರ ಫ.ಗು. ಹಳಕಟ್ಟಿ. ಅತ್ಯುತ್ತಮ ವಕೀಲರಾದ ಅವರು, ಹಣ ಸಂಪಾದನೆ, ಸ್ಥಾನಮಾನಗಳ ಹಿಂದೆ ಹೋಗಲಿಲ್ಲ. ಪ್ರಾಮಾಣಿಕತೆ ಮತ್ತು ಕಾರ್ಯದಕ್ಷತೆ ಬಗ್ಗೆ ಅವರು ಅಳವಡಿಸಿಕೊಂಡ ವಿಧಾನಗಳು ರಾಜಕಾರಣಿಗಳು, ಅಧಿಕಾರಿಗಳಿಗೆ ದಾರಿ ದೀಪವಾಗಲಿದೆ. ಸರಳ ಜೀವನ ನಡೆಸಿದ ಹಳಕಟ್ಟಿ ಅವರು, ವಚನ ಸಾಹಿತ್ಯ ಸಂರಕ್ಷಿಸಿದರು. ಈ ಮೂಲಕ ಕನ್ನಡ ಸಾಹಿತ್ಯದ ಬೆಳವಣಿಗೆಗೂ ದೊಡ್ಡ ಕೊಡುಗೆ ನೀಡಿದರು’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ‘ವಿಶ್ವ ಸಾಹಿತ್ಯಕ್ಕೆ ಜನಪದ ಸಾಹಿತ್ಯ ಹಾಗೂ ವಚನ ಸಾಹಿತ್ಯ ಕೊಡುಗೆ ನೀಡಿದೆ. ಈ ಸಾಹಿತ್ಯಗಳು ಬದುಕನ್ನು ಕಟ್ಟಿಕೊಡುತ್ತವೆ. ವಚನ ಸಾಹಿತ್ಯದ ಜತೆಗೆ ಶಿಕ್ಷಣ, ನೀರಾವರಿ ಕ್ಷೇತ್ರಕ್ಕೂ ಅವರು ಕೊಡುಗೆ ನೀಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಫ.ಗು.ಹಳಕಟ್ಟಿ ಅವರ ಬಗ್ಗೆ ಉಪನ್ಯಾಸ ನೀಡಿದ ಪ್ರಾಧ್ಯಾಪಕ ಜೆ.ಎಸ್. ಪಾಟೀಲ, ‘ವಚನಕಾರರು ಲಕ್ಷಾಂತರ ವಚನಗಳನ್ನು ರಚಿಸಿದ್ದರೂ 22 ಸಾವಿರ ವಚನಗಳು ಮಾತ್ರ ಲಭ್ಯ ಇವೆ. ವಚನ ಸಂಸ್ಕೃತಿಯನ್ನು 20ನೇ ಶತಮಾನದಲ್ಲಿ ಫ.ಗು. ಹಳಕಟ್ಟಿ ಅವರು ಪುನರುತ್ಥಾನ ಮಾಡಿದರು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.