ADVERTISEMENT

‘ಫೇಸ್‌ಬುಕ್‌’ನಲ್ಲಿ ಸಲುಗೆ– ಮೋಸ!

ವಿವಾಹವಾಗುವುದಾಗಿ ನಂಬಿಸಿ ₹ 11.23 ಲಕ್ಷ ವಂಚಿಸಿದ ಆರೋಪಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 19:53 IST
Last Updated 6 ಆಗಸ್ಟ್ 2019, 19:53 IST
   

ಬೆಂಗಳೂರು: ‘ಫೇಸ್‌ಬುಕ್‌’ನಲ್ಲಿ ನಕಲಿ ಹೆಸರಿನಲ್ಲಿ ಖಾತೆ ತೆರೆದು, ಭಾವನಾತ್ಮಕ ವಿಚಾರ, ಬಣ್ಣ ಬಣ್ಣದ ಮಾತುಗಳಿಂದ ಮಹಿಳೆಯರ ಸ್ನೇಹ ಸಲುಗೆ ಬೆಳೆಸಿ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನ್ನು ಸೈಬರ್‌ ಕ್ರೈಮ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕಂಚಿಕೈ ನಿವಾಸಿ, ಸದ್ಯ ವರ್ತೂರಿನ ಈದ್ಗಾ ರಸ್ತೆಯ ಬಳಿಯ ಪೃಥ್ವಿ ಲೇಕ್‌ ರೆಸಿಡೆನ್ಸಿಯಲ್ಲಿ ನೆಲೆಸಿರುವ ಪ್ರಮೋದ್‌ ಹೆಗಡೆ (28) ಬಂಧಿತ ಆರೋಪಿ. ಆತನಿಂದ 40 ಗ್ರಾಂ ತೂಕದ ಚಿನ್ನಾಭರಣ, ಕಾರು, ಲ್ಯಾಪ್‌ಟಾಪ್‌, ಮೊಬೈಲ್‌ ಸೇರಿ ಒಟ್ಟು ₹ 6.20 ಲಕ್ಷದ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆತನಿಂದ ವಂಚನೆಗೆ ಒಳಗಾದ ಮಹಿಳೆಯೊಬ್ಬರು ಇದೇ ಫೆ. 25ರಂದು ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆ ಸಲುವಾಗಿ ಆತನನ್ನು ಕಸ್ಟಡಿಗೆ ಪಡೆ
ದಿದ್ದರು. ಏಳುದಿನ ವಿಚಾರಣೆ ನಡೆಸಿದಾಗ ಆತನ ವಂಚನೆ ಪ್ರಕರಣ ಗಳು ಬಯಲಿಗೆ ಬಂದಿವೆ.

ADVERTISEMENT

ಏನಿದು ವಂಚನೆ: ‘ಆಕಾಶ್‌ ಭಟ್‌’ ಎಂಬ ಹೆಸರಿನಲ್ಲಿ ಫೇಸ್‌ಬುಕ್‌ ಖಾತೆ ತೆರೆದಿರುವ ಪ್ರಮೋದ್‌, ಮಹಿಳೆಯರಿಗೆ ‘ಫ್ರೆಂಡ್‌’ ರಿಕ್ವೆಸ್ಟ್‌ ಕಳುಹಿಸುತ್ತಿದ್ದ. ರಿಕ್ವೆಸ್ಟ್‌ಗೆ ಸಮ್ಮತಿ ಸೂಚಿಸಿದವರ ಜೊತೆ ‘ಮೆಸೆಂಜರ್‌’ ಮೂಲಕ ಚಾಟಿಂಗ್‌ ನಡೆಸುತ್ತಾ ಆತ್ಮೀಯನಾಗುತ್ತಿದ್ದ ಪ್ರಮೋದ್‌, ಅತಿ ಸಲುಗೆಯಿಂದ ವರ್ತಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಚಾಟಿಂಗ್‌ ಮಾಡುವ ಮಹಿಳೆಯರ ಖಾಸಗಿ ವಿಷಯವನ್ನು ಕೇಳಿ ತಿಳಿದುಕೊಂಡು, ಬಳಿಕ ವಿವಾಹವಾಗುವ ಪ್ರಸ್ತಾವ ಮುಂದಿಡುತ್ತಿದ್ದ. ಅಲ್ಲದೆ, ಭಾವನಾತ್ಮಕವಾಗಿ ತನ್ನತ್ತ ಸೆಳೆಯುತ್ತಿದ್ದ. ತನ್ನ ಕಷ್ಟ, ಕಾರ್ಪಣ್ಯಗಳನ್ನೂ ಅವರ ಬಳಿ ತೋಡಿಕೊಳ್ಳುತ್ತಿದ್ದ. ಹೀಗೆ ಸಲುಗೆ ಬೆಳೆಸಿ ನಂಬಿಸುತ್ತಿದ್ದ ಪ್ರಮೋದ್‌, ಒಂದು ವರ್ಷ ಅವಧಿಯಲ್ಲಿ ಹಲವು ಮಹಿಳೆಯರಿಂದ ಹಂತ ಹಂತವಾಗಿ ಸುಮಾರು ₹ 11,23,295 ಹಣವನ್ನು ವಿವಿಧ ಬ್ಯಾಂಕುಗಳಲ್ಲಿರುವ ತನ್ನ ಖಾತೆಗಳಿಗೆ ಜಮೆ ಮಾಡಿಸಿದ್ದ. ವಂಚಿಸಿದ ಬಳಿಕ ಮಹಿಳೆಯರ ಸಂಪರ್ಕದಿಂದ ದೂರವಾಗಿ, ಫೇಸ್‌ಬುಕ್‌ ಫ್ರೆಂಡ್‌ಶಿಪ್‌ ಕಡಿತಗೊಳಿಸುತ್ತಿದ್ದ’ ಎಂದರು.

‘ದೂರು ನೀಡಿದ ಮಹಿಳೆಗೆ, ತಾನು ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಕಂಪನಿಯೊಂದರ ಶಾಖೆಯ ವ್ಯವಸ್ಥಾಪಕ ಮತ್ತು ಸೂಪರ್‌ ಮಾರ್ಕೆಟ್‌ ಬಿಸಿನೆಸ್‌ ಕೆಲಸ ಮಾಡುವುದಾಗಿ ನಂಬಿಸಿದ್ದ. ಹೀಗೆ ಇತರ ಕೆಲವು ಮಹಿಳೆಯರನ್ನೂ ಪ್ರಮೋದ್‌ ವಂಚಿಸಿರುವ ಸುಳಿವು ಸಿಕ್ಕಿದೆ. ಈತನಿಂದ ವಂಚನೆಗೆ ಒಳಗಾದ ಮಹಿಳೆಯರು ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿರುವ ಸೈಬರ್‌ ಕ್ರೈಮ್‌ ಠಾಣೆಗೆ ದೂರು ನೀಡಬಹುದು’ ಎಂದೂ ಪೊಲೀಸರು ತಿಳಿಸಿದರು.

‘ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ವ್ಯಕ್ತಿಗಳ ಜೊತೆ, ಅವರ ಪೂರ್ವಾಪರ ತಿಳಿಯದೆ ವ್ಯವಹರಿಸಬೇಡಿ. ಖಾಸಗಿ ಮಾಹಿತಿಗಳನ್ನು, ಕ್ಷಣಗಳನ್ನು ಹಂಚಿಕೊಂಡು ಅಥವಾ ಬಣ್ಣದ ಮಾತುಗಳಿಗೆ ಮರುಳಾಗಿ ಹಣ ವರ್ಗಾವಣೆ ಮಾಡಿ ವಂಚನೆಗೆ ಒಳಗಾಗಬೇಡಿ’ ಎಂದೂ ಪೊಲೀಸರು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.